ಪ್ರಧಾನಿಗೆ ಅಸ್ಸಾಂನಲ್ಲಿ ಕರಿ ಪತಾಕೆ ಪ್ರದರ್ಶನ: ಪೌರತ್ವ ಮಸೂದೆಯಿಂದ ತೊಂದರೆಯಿಲ್ಲ ಎಂದ ಮೋದಿ
ಗುವಹಾಟಿ, ಫೆ. 9: ವಿವಾದಿತ ಪೌರತ್ವ ಮಸೂದೆಗೆ ಸಂಬಂಧಿಸಿದಂತೆ ಪ್ರತಿಭಟನಾಕಾರರು ಸತತ ಎರಡನೇ ದಿನ ಪ್ರಧಾನಿ ನರೇಂದ್ರ ಮೋದಿಗೆ ಕರಿ ಪತಾಕೆಗಳನ್ನು ಶನಿವಾರ ಪ್ರದರ್ಶಿಸಿದ್ದಾರೆ.
''ಈ ಮಸೂದೆ ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳಿಗೆ ಯಾವುದೇ ರೀತಿಯಲ್ಲಿ ಪ್ರತಿಕೂಲ ಪರಿಣಾಮ ಬೀರದು'' ಎಂದು ಪ್ರಧಾನಿ ಭರವಸೆ ನೀಡಿದರೂ ಅದು ಜನರ ಕೋಪವನ್ನು ಶಮನಗೊಳಿಸಿಲ್ಲ.
ಚಂಗ್ಸಾರಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಸಿಸಿ ಮಾತನಾಡಿದ ಪ್ರಧಾನಿ ''ಪೌರತ್ವ ಮಸೂದೆ ಕೇವಲ ಈಶಾನ್ಯ ಭಾರತ ಅಥವಾ ಅಸ್ಸಾಂಗೆ ಸಂಬಂಧಿಸಿ ದ್ದಲ್ಲ. ತಮ್ಮ ಧರ್ಮಾನುಸಾರ ಬದುಕಲು ಬಯಸುವವರಿಗೆ ಹಾಗೂ ತಮ್ಮ ಜೀವವುಳಿಸಲು ಪಲಾಯನಗೈದು ಭಾರತ ಮಾತೆಯ ಬಳಿ ಬಂದವರ ಪ್ರಯೋಜನಕ್ಕಾಗಿ ಇದನ್ನು ಜಾರಿಗೆ ತರಲಾಗುತ್ತಿದೆ. ಅಂತಹ ಜನರನ್ನು ನೀವು ಭೇಟಿಯಾಗಿ ಅವರನ್ನು ಅರ್ಥೈಸಿದಾಗ ನಿಮಗಿದು ತಿಳಿಯುತ್ತದೆ,'' ಎಂದು ಹೇಳಿದರು.
ಶುಕ್ರವಾರ ಸಂಜೆ ಅಸ್ಸಾಂಗೆ ಮೋದಿ ಆಗಮಿಸಿದಾಗ ಕನಿಷ್ಠ ನಾಲ್ಕು ಕಡೆಗಳಲ್ಲಿ ಅವರಿಗೆ ಕರಿ ಪತಾಕೆ ಪ್ರದರ್ಶಿಸಲಾಯಿತು. ಆಲ್ ಅಸ್ಸಾಂ ವಿದ್ಯಾರ್ಥಿ ಯೂನಿಯನ್ ಸದಸ್ಯರು ಪ್ರಧಾನಿಯ ವಾಹನ ಪಡೆ ಸಾಗುತ್ತಿದ್ದಾಗ ಘೋಷಣೆಗಳನ್ನು ಕೂಗಿದರು.
ಶನಿವಾರ ಬೆಳಗ್ಗೆ ಅಸ್ಸಾಂ ಜತೀಯತಾಬಾದಿ ಯುವ ಛಾತ್ರ ಪರಿಷದ್ ಸದಸ್ಯರು ಗುವಹಾಟಿಯ ಮಚ್ಖೋವಾ ಪ್ರದೇಶದಲ್ಲಿ ಪ್ರಧಾನಿಗೆ ಕರಿ ಪತಾಕೆ ತೋರಿಸಿದರೆ ಗೌಹಾಟಿ ವಿವಿ ಪಕ್ಕ ಪ್ರಧಾನಿ ವಾಹನ ಪಡೆ ಸಾಗಿದಾಗ ವಿದ್ಯಾರ್ಥಿಗಳ ಗುಂಪೊಂದು ಅವರಿಗೆ ಕರಿ ಪತಾಕೆಗಳನ್ನು ಪ್ರದರ್ಶಿಸಿತು.
ತಮ್ಮ ಅರುಣಾಚಲ ಪ್ರದೇಶ ಭೇಟಿಯ ವೇಳೆ ಪ್ರಧಾನಿ ಹೊಲ್ಲೊಂಗಿಯಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ಉದ್ಘಾಟಿಸಿದರು.