ಉಡುಪಿಯಲ್ಲಿ ‘ಸಿಟಿ ಸೆಂಟರ್’ ಶಾಪಿಂಗ್ ಮಾಲ್ ಶುಭಾರಂಭ

ಉಡುಪಿ, ಫೆ. 9: ಉಡುಪಿ ಡೆವಲಪರ್ಸ್ ವತಿಯಿಂದ ನಗರದ ಜಾಮೀಯ ಮಸೀದಿಯ ಎದುರಿನ ವಿಶಾಲ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ‘ಸಿಟಿ ಸೆಂಟರ್’ ಸರ್ವಸುಸಜ್ಜಿತ ಶಾಪಿಂಗ್ ಮಾಲ್‌ನ ಉದ್ಘಾಟನೆಯನ್ನು ಬಿ.ಎಂ. ಅಬ್ಬಾಸ್ ಉಡುಪಿ ಶನಿವಾರ ನೆರವೇರಿಸಿದರು.
ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಮಾಲ್‌ಗಳು ಹೆಚ್ಚಾದಂತೆ ನಗರದ ಅಭಿವೃದ್ಧಿ ಕೂಡ ಆಗುತ್ತದೆ. ಸಿಟಿ ಸೆಂಟರ್‌ನಂತಹ ಮಾಲ್ ಗಳು ಉಡುಪಿ ನಗರಕ್ಕೆ ಅವಶ್ಯಕವಾಗಿದೆ. ಇಲ್ಲಿರುವ ಬ್ರಾಡೆಂಡ್ ಕಂಪೆನಿಗಳ ಶಾಪ್‌ಗಳು ಇದರ ಗರಿಮೆಯನ್ನು ಇನ್ನಷ್ಟು ಹೆಚ್ಚಿಸಿವೆ ಎಂದು ಹೇಳಿದರು.
ಇಂದಿನ ತಲೆಮಾರು ಮಾಲ್‌ಗಳಿಗೆ ಕೇವಲ ಖರೀದಿ ಮಾತ್ರವಲ್ಲ ಸಮಯ ಕಳೆಯಲು ಕೂಡ ಬರುತ್ತಾರೆ. ಅತ್ಯುತ್ತಮ ಹಾಗೂ ಗುಣಮಟ್ಟದ ವಸ್ತುಗಳು ಇಲ್ಲಿ ದೊರೆಯುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಆಕರ್ಷಿಸಲಿದೆ. ವಿಶಾಲ ಹಾಗೂ ಸುರಕ್ಷಿತ ಪಾರ್ಕಿಂಗ್ ವ್ಯವಸ್ಥೆ ಕೂಡ ಇಲ್ಲಿದೆ. ಆದುದರಿಂದ ಈ ಸಿಟಿ ಸೆಂಟರ್‌ನಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ದೊರೆಯಲಿ ಎಂದು ಅವರು ಹಾರೈಸಿದರು.
ಉಡುಪಿ ಜಾಮೀಯ ಮಸೀದಿಯ ಇಮಾಮ್ ಮೌಲಾನ ರಶೀದ್ ಅಹ್ಮದ್ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ವಿಜಯ ಬ್ಯಾಂಕಿನ ಉಪ ಮಹಾಪ್ರಬಂಧಕ ರವಿ ಚಂದ್ರ ಕೆ.ಎನ್., ಉಡುಪಿ ಕ್ರೆಡೈ ಅಧ್ಯಕ್ಷ ಜೆರ್ರಿ ವಿನ್ಸೆಂಟ್ ಡಯಸ್, ಟಿಪ್ ಟಾಪ್ ಸಾಗರ್ ಇದರ ಇಬ್ರಾಹಿಂ ಸಾಹೇಬ್, ಉಡುಪಿ ಟಿಎಂಎ ಪೈ ಆಸ್ಪತ್ರೆಯ ವೈದ್ಯ ಡಾ. ಅಫ್ಝಲ್ ಪಿ.ಮುಹಮ್ಮದ್, ಉಡುಪಿ ನಗರಸಭೆ ಸದಸ್ಯ ಟಿ.ಜಿ.ಹೆಗ್ಡೆ, ಉದ್ಯಮಿ ಅಬ್ದುಲ್ ಜಲೀಲ್ ಸಾಹೇಬ್ ಉದ್ಯಾವರ ಮುಖ್ಯ ಅತಿಥಿಗಳಾಗಿದ್ದರು.
ವೇದಿಕೆಯಲ್ಲಿ ನ್ಯಾಯವಾದಿ ಲಕ್ಷ್ಮಣ್ ಶೆಣೈ, ಉದ್ಯಮಿಗಳಾದ ಕಿಶನ್ ಹೆಗ್ಡೆ ಕೊಳ್ಕೆಬೈಲು, ಮುಹಮ್ಮದ್ ಮೌಲಾ, ಶಾಬನ್ ಸಾಹೇಬ್ ಮೊದಲಾದವರು ಉಪಸ್ಥಿತರಿದ್ದರು.
ಅಬ್ದುಲ್ ಅಝೀಝ್ ಕುರಾನ್ ಪಠಿಸಿದರು. ಉಡುಪಿ ಡೆವಲಪರ್ಸ್‌ನ ಆಡಳಿತ ನಿರ್ದೇಶಕ ಜಮಾಲುದ್ದೀನ್ ಸ್ವಾಗತಿಸಿದರು. ಮೈ ಸ್ಪೇಸ್‌ನ ಶ್ರೀಧರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಚೇತನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.














