ಕಳ್ಳಭಟ್ಟಿ ಸಾರಾಯಿ ದುರಂತಕ್ಕೆ ಕನಿಷ್ಟ 70 ಬಲಿ

ಲಕ್ನೊ, ಫೆ.9: ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ಗ್ರಾಮವೊಂದರಲ್ಲಿ ಕಳ್ಳಭಟ್ಟಿ ಸಾರಾಯಿ ಸೇವಿಸಿದ ಉತ್ತರಾಖಂಡ ಹಾಗೂ ನೆರೆ ರಾಜ್ಯ ಉತ್ತರಪ್ರದೇಶದ ಕನಿಷ್ಟ 70 ಮಂದಿ ಬಲಿಯಾಗಿದ್ದು, ಇತರ 40 ಮಂದಿ ಅಸ್ವಸ್ಥರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ದುರಂತದ ಬಗ್ಗೆ ನ್ಯಾಯಾಧಿಕಾರಿಯ ತನಿಖೆಗೆ ಆದೇಶಿಸಲಾಗಿದ್ದು ಅಬಕಾರಿ ಇಲಾಖೆಯ 13 ಮತ್ತು ಪೊಲೀಸ್ ಇಲಾಖೆಯ 4 ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗಿದೆ. ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ರೂರ್ಕಿ ನಗರದ ಬಳಿಯಿರುವ ಬಾಲುಪುರ ಗ್ರಾಮದ ವ್ಯಕ್ತಿಯೊಬ್ಬ ಮೃತಪಟ್ಟಿದ್ದು, ಆತನ ಅಂತ್ಯಸಂಸ್ಕಾರದ ಬಳಿಕದ 13ನೇ ದಿನದ ಕಾರ್ಯಕ್ರಮ ಗುರುವಾರ ಮುಗಿದ ಬಳಿಕ ಅಲ್ಲಿ ಸೇರಿದ್ದವರು ಸ್ಥಳೀಯವಾಗಿ ತಯಾರಿಸಲಾದ ಸಾರಾಯಿ ಸೇವಿಸಿ ಅಸ್ವಸ್ಥರಾಗಿದ್ದಾರೆ.
ಈ ಘಟನೆಯಲ್ಲಿ ಕನಿಷ್ಟ 24 ಮಂದಿ ಮೃತಪಟ್ಟಿದ್ದಾರೆ ಎಂದು ಉತ್ತರಾಖಂಡ ಪೊಲೀಸರು ತಿಳಿಸಿದ್ದಾರೆ. ಈ ಗ್ರಾಮಕ್ಕೆ ಸಮೀಪದಲ್ಲಿರುವ ಉತ್ತರಪ್ರದೇಶದ ಸಹಾರನ್‌ಪುರ ಜಿಲ್ಲೆಯ ಕೆಲವು ಜನ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಮನೆಗೆ ಬಂದ ಬಳಿಕ ತೀವ್ರ ಅಸ್ವಸ್ಥಗೊಂಡು 46 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಬಾಲುಪುರದಲ್ಲಿ ಕಡಿಮೆ ಬೆಲೆಗೆ ದೊರೆತ ಸಾರಾಯಿಯನ್ನು ಖರೀದಿಸಿ ಅದನ್ನು ಸಹಾರನ್‌ಪುರಕ್ಕೆ ತಂದು ಮಾರಾಟ ಮಾಡಿರುವ ಸಾಧ್ಯತೆಯೂ ಇದೆ ಎಂದವರು ತಿಳಿಸಿದ್ದಾರೆ. ಮೃತಪಟ್ಟವರ ಕುಟುಂಬದವರಿಗೆ ತಲಾ 2 ಲಕ್ಷ ರೂ. ಪರಿಹಾರಧನವನ್ನು ಉತ್ತರಪ್ರದೇಶ ಸರಕಾರ ಘೋಷಿಸಿದ್ದು, 10 ಪೊಲೀಸರನ್ನು ಅಮಾನತುಗೊಳಿಸಿದೆ. ಸಹಾರನ್‌ಪುರ ಪ್ರದೇಶದಲ್ಲಿ ಗುರುವಾರ ರಾತ್ರಿ ಆಲಿಕಲ್ಲು ಸಹಿತ ಭಾರೀ ಮಳೆ ಸುರಿದ ಕಾರಣ ಸಂತ್ರಸ್ತರನ್ನು ಆಸ್ಪತ್ರೆಗೆ ದಾಖಲಿಸಲು ಆಗಲಿಲ್ಲ. ಶುಕ್ರವಾರ ಬೆಳಿಗ್ಗೆ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ . ಸಹಾರನ್‌ಪುರದ ಆಸ್ಪತ್ರೆಯಲ್ಲಿ 42 ಮಂದಿ ಚಿಕಿತ್ಸೆ ಪಡೆಯುತ್ತಿದ್ದು ಇವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಅಲ್ಲದೆ ಹರಿದ್ವಾರ ಜಿಲ್ಲೆಯಲ್ಲೂ ಕೆಲವರು ಚಿಕಿತ್ಸೆಗೆ ದಾಖಲಾಗಿದ್ದಾರೆ. ಪಿಂಟು ಎಂಬ ಹೆಸರಿನ ವ್ಯಕ್ತಿಯೊಬ್ಬ ಬಾಲುಪುರದಿಂದ 30 ಕಳ್ಳಭಟ್ಟಿ ಸಾರಾಯಿಯ ಪೌಚ್‌ಗಳನ್ನು ಖರೀದಿಸಿ ಸಹಾರಣ್‌ಪುರಕ್ಕೆ ತಂದು ಅಲ್ಲಿ ಮಾರಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಸಂತ್ರಸ್ತರಲ್ಲಿ ಈತನ ಖಾಯಂ ಗ್ರಾಹಕರೂ ಸೇರಿದ್ದಾರೆಯೇ ಎಂಬುದು ದೃಢಪಟ್ಟಿಲ್ಲ. ಮೃತಪಟ್ಟವರಲ್ಲಿ 11 ಮಂದಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಇಲ್ಲಿ ಒಂದು ಪೌಚ್ ದೊರೆತಿದ್ದು ಅದನ್ನು ಪ್ರಯೋಗಾಲಯದ ಪರೀಕ್ಷೆಗೆ ರವಾನಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಈ ಮಧ್ಯೆ, ಪ್ರತ್ಯೇಕ ಪ್ರಕರಣವೊಂದರಲ್ಲಿ ಪೂರ್ವ ಉತ್ತರಪ್ರದೇಶದ ಕುಶಿನಗರ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಕಳ್ಳಭಟ್ಟಿ ಸಾರಾಯಿ ಸೇವನೆಯಿಂದ 11 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕುಶಿನಗರ ಹಾಗೂ ಸಹಾರನ್‌ಪುರದ ಜಿಲ್ಲಾ ಅಬಕಾರಿ ಅಧಿಕಾರಿಗಳ ವಿರುದ್ಧ ಇಲಾಖಾ ಕ್ರಮಕ್ಕೆ ಮುಖ್ಯಮಂತ್ರಿ ಆದಿತ್ಯನಾಥ್ ಆದೇಶಿಸಿರುವುದಾಗಿ ವರದಿಯಾಗಿದೆ.







