ಮೀಸಲಾತಿಗೆ ಆಗ್ರಹಿಸಿ ಗುಜ್ಜರರ ಪ್ರತಿಭಟನೆ: ಹಲವು ರೈಲುಗಳ ಸಂಚಾರ ರದ್ದು
ಸವಾಯಿ ಮಧೋಪುರ, ಫೆ. 9: ಮೀಸಲಾತಿಗೆ ಆಗ್ರಹಿಸುತ್ತಿರುವ ಗುಜ್ಜರ ಸಮುದಾಯದ ಗುಂಪೊಂದು ರೈಲ್ವೆ ಟ್ರಾಕ್‌ನಲ್ಲಿ ಟೆಂಟ್ ಹಾಕಿ ಪ್ರತಿಭಟನೆ ನಡೆಸಿದ ಪರಿಣಾಮ ಕೋಟಾ ವಿಭಾಗದ ಹಲವು ರೈಲುಗಳ ಸಂಚಾರ ರದ್ದುಗೊಂಡಿತು. ಮೀಸಲಾತಿ ಚಳವಳಿಯ ಹಿನ್ನೆಲೆಯಲ್ಲಿ ಪ್ರತಿಭಟನಕಾರರು ಸವಾಯಿ ಮಧೋಪುರ ಜಿಲ್ಲೆಯ ಮಕ್ಸುದಾನಪುರ ಗ್ರಾಮದಲ್ಲಿರುವ ಮಲಾರ್ನಾ ದುಂಗಾರ್ ರೈಲ್ವೆ ನಿಲ್ದಾಣದ ಸಮೀಪ ಇರುವ ಹಳಿಯಲ್ಲಿ ಟೆಂಟ್ ಹಾಕಿ ಪ್ರತಿಭಟನೆ ನಡೆಸಿದರು.
ರೈಲು ಹಳಿ ಮೇಲೆ ನಡೆದ ಪ್ರತಿಭಟನೆ ಹಿನ್ನೆಲೆಯಲ್ಲಿ 4ಕ್ಕಿಂತಲೂ ಅಧಿಕ ರೈಲುಗಳ ಸಂಚಾರದ ಹಳಿ ಬದಲಾಯಿಸಲಾಯಿತು. ಪಶ್ಚಿಮ ಕೇಂದ್ರ ರೈಲ್ವೆಯ ಕೋಟಾ ವಿಭಾಗದ ಸವಾಯಿ ಮಧೋಪುರದಿಂದ ಬಯನಾನಾ ವಿಭಾಗ-ನಿಮೋಡಾದಿಂದ ಮಲಾರ್ನ ಬ್ಲಾಕ್ ವಿಭಾಗದ ನಡುವಿನ 14 ರೈಲುಗಳ ಸಂಚಾರ ರದ್ದುಗೊಳಿಸಲಾಯಿತು. ನಮಗೆ ಉತ್ತಮ ಮುಖ್ಯಮಂತ್ರಿ ಹಾಗೂ ಉತ್ತಮ ಪ್ರಧಾನ ಮಂತ್ರಿ ಇದ್ದಾರೆ. ಆದರೆ, ಗುಜ್ಜರ ಸಮುದಾಯದ ಬೇಡಿಕೆ ಆಲಿಸುವಂತೆ ನಾವು ಬಯಸುತ್ತೇವೆ. ಮೀಸಲಾತಿ ನೀಡುವುದು ಗುಡ್ಡೆ ಹತ್ತುವ ಗುರಿ ಅಲ್ಲ ಎಂದು ಓರ್ವ ಪ್ರತಿಭಟನಕಾರ ಹೇಳಿದ್ದಾರೆ.





