ಶಿಲ್ಲಾಂಗ್: ಕೋಲ್ಕತಾ ಪೊಲೀಸ್ ಆಯುಕ್ತರ ವಿಚಾರಣೆಯನ್ನು ಆರಂಭಿಸಿದ ಸಿಬಿಐ
ಶಿಲ್ಲಾಂಗ್,ಫೆ.9: ಶಾರದಾ ಮತ್ತು ರೋಸ್ ವ್ಯಾಲಿ ಚಿಟ್ ಫಂಡ್ ಹಗರಣಗಳಿಗೆ ಸಂಬಂಧಿಸಿದಂತೆ ಕೋಲ್ಕತಾ ಪೊಲೀಸ್ ಆಯುಕ್ತ ರಾಜೀವ ಕುಮಾರ್ ಅವರ ವಿಚಾರಣೆಯನ್ನು ಸಿಬಿಐ ಶನಿವಾರ ಇಲ್ಲಿಯ ತನ್ನ ಕಚೇರಿಯಲ್ಲಿ ಆರಂಭಿಸಿದೆ.
ಕುಮಾರ್,ಅವರ ವಕೀಲ ಬಿಸ್ವಜಿತ್ ದೇಬ್ ಹಾಗೂ ಹಿರಿಯ ಐಪಿಎಸ್ ಅಧಿಕಾರಿಗಳಾದ ಜಾವೇದ್ ಶಮೀಂ ಮತ್ತು ಮುರಳೀಧರ ಶರ್ಮಾ ಅವರು ಇಂದು ಬೆಳಿಗ್ಗೆ 11 ಗಂಟೆಗೆ ಇಲ್ಲಿಯ ಓಕ್ ಲ್ಯಾಂಡ್ ಪ್ರದೇಶದಲ್ಲಿರುವ ಬಿಗಿಭದ್ರತೆಯ ಸಿಬಿಐ ಕಚೇರಿಗೆ ಆಗಮಿಸಿದರು. 30 ನಿಮಿಷಗಳಲ್ಲಿ ದೇಬ್ ಮತ್ತು ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ಅಲ್ಲಿಂದ ನಿರ್ಗಮಿಸುವಂತೆ ಸೂಚಿಸಲಾಯಿತು ಎಂದು ಅಧಿಕೃತ ಮೂಲಗಳು ತಿಳಿಸಿದವು. ಕುಮಾರ್ ವಿಚಾರಣೆಗಾಗಿ ಮೂವರು ಹಿರಿಯ ಸಿಬಿಐ ಅಧಿಕಾರಿಗಳು ಶುಕ್ರವಾರವೇ ಶಿಲ್ಲಾಂಗ್ ತಲುಪಿದ್ದರು.
ಶಾರದಾ ಮತ್ತು ರೋಸ್ ವ್ಯಾಲಿ ಚಿಟ್‌ಫಂಡ್ ಹಗರಣಗಳ ಪ್ರಕರಣಗಳ ಸಿಬಿಐ ತನಿಖೆೆಗೆ ಸಹಕರಿಸುವಂತೆ ಮಂಗಳವಾರ ಕುಮಾರ್‌ಗೆ ನಿರ್ದೇಶ ನೀಡಿದ್ದ ಸರ್ವೋಚ್ಚ ನ್ಯಾಯಾಲಯವು,ಯಾವುದೇ ಕಾರಣಕ್ಕೂ ಅವರನ್ನು ಬಂಧಿಸುವಂತಿಲ್ಲ ಎಂದು ಸ್ಪಷ್ಟಪಡಿಸಿತ್ತು.
ಚಿಟ್‌ಫಂಡ್ ಹಗರಣಗಳ ತನಿಖೆಯನ್ನು ಕೈಗೊಂಡಿದ್ದ ವಿಶೇಷ ತನಿಖಾ ತಂಡದ ನೇತೃತ್ವ ವಹಿಸಿದ್ದ ಕುಮಾರ್ ಸಾಕ್ಷ್ಯಗಳನ್ನು ನಾಶಗೊಳಿಸಿದ್ದಾರೆ ಎಂದು ಸಿಬಿಐ ಆರೋಪಿಸಿದೆ.