ಮಧ್ಯಪ್ರದೇಶದಲ್ಲಿ ಗೋಹತ್ಯೆ ಆರೋಪಿಗಳ ವಿರುದ್ಧ ಎನ್‌ಎಸ್‌ಎ ಹೇರಿರುವುದು ತಪ್ಪು: ಚಿದಂಬರಂ

ಹೊಸದಿಲ್ಲಿ,ಫೆ.9: ಗೋಹತ್ಯೆ ಪ್ರಕರಣವೊಂದರಲ್ಲಿ ಬಂಧಿಸಲ್ಪಟ್ಟಿರುವ ಮೂವರು ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್‌ಎಸ್‌ಎ)ಯನ್ನು ಹೇರುವ ಮಧ್ಯಪ್ರದೇಶದ ಕಾಂಗ್ರೆಸ್ ಸರಕಾರದ ನಿರ್ಧಾರವು ತಪ್ಪಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು ಹೇಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಪ್ಪನ್ನು ಸರಿಪಡಿಸುವಂತೆ ಕಮಲನಾಥ ಸರಕಾರಕ್ಕೆ ಸೂಚಿಸಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.
ಶುಕ್ರವಾರ ಇಲ್ಲಿ ತನ್ನ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಚಿದಂಬರಂ ಅವರು,ಈ ಪ್ರಕರಣದಲ್ಲಿ ಎನ್ ಎಸ್‌ಎ ಹೇರಿಕೆ ತಪ್ಪಾಗಿದೆ ಮತ್ತು ಈ ತಪ್ಪನ್ನು ಪಕ್ಷದ ನಾಯಕತ್ವವು ರಾಜ್ಯ ಸರಕಾರದ ಗಮನಕ್ಕೆ ತಂದಿದೆ ಎಂದು ಹೇಳಿದರು.
ಮಧ್ಯಪ್ರದೇಶದ ಖಾಂಡ್ವಾ ಪಟ್ಟಣದಲ್ಲಿ ಕಳೆದ ವಾರ ಗೋಹತ್ಯೆ ಪ್ರಕರಣದಲ್ಲಿ ಮೂವರ ವಿರುದ್ಧ ಪೊಲೀಸರು ಎನ್‌ಎಸ್‌ಎ ಹೇರಿದ್ದಾರೆ. ಈ ಕಾನೂನಿನಡಿ ಆರೋಪಿಗಳನ್ನು ಯಾವುದೇ ವಿಚಾರಣೆಯಿಲ್ಲದೆ 12 ತಿಂಗಳುಗಳ ಕಾಲ ಜೈಲಿನಲ್ಲಿರಿಸಬಹುದು.
ತನ್ಮಧ್ಯೆ ಕಾಂಗ್ರೆಸ್ ವಕ್ತಾರ ರಣದೀಪ ಸಿಂಗ ಸುರ್ಜೆವಾಲಾ ಅವರು,ಕಾನೂನು ಮತ್ತು ಸುವ್ಯವಸ್ಥೆ ಮುಖ್ಯಮಂತ್ರಿ ಮತ್ತು ಪೊಲೀಸರ ಹೊಣೆಗಾರಿಕೆಯಾಗಿರುವುದರಿಂದ ಈ ವಿಷಯದಲ್ಲಿ ಪಕ್ಷವು ಅನಗತ್ಯವಾಗಿ ಹಸ್ತಕ್ಷೇಪ ಮಾಡುವುದಿಲ್ಲ. ಅಮಾಯಕರನ್ನು ಯಾವುದೇ ರೀತಿಯ ದಂಡನೆಗೆ ಗುರಿಯಾಗಿಸುವುದಿಲ್ಲ ಮತ್ತು ತಪ್ಪಿತಸ್ಥರಾಗಿರುವ ಯಾರನ್ನೂ ಬಿಡುವುದಿಲ್ಲ ಎಂದು ಶನಿವಾರ ಇಲ್ಲಿ ಹೇಳಿದರು.







