ಸಂಜಯ ಸುಬ್ರಮಣ್ಯಂ ಅವರಿಗೆ ಪ್ರತಿಷ್ಠಿತ ಡ್ಯಾನ್ ಡೇವಿಡ್ ಪ್ರಶಸ್ತಿ

ಹೊಸದಿಲ್ಲಿ,ಫೆ.9: ಅಮೆರಿಕದ ಲಾಸ್ ಏಂಜೆಲ್ಸ್‌ನ ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದಲ್ಲಿ ಇತಿಹಾಸದ ಪ್ರೊಫೆಸರ್ ಆಗಿರುವ ಖ್ಯಾತ ಭಾರತೀಯ ಇತಿಹಾಸಜ್ಞ ಸಂಜಯ ಸುಬ್ರಮಣ್ಯಂ ಅವರು ಇತಿಹಾಸ ಕ್ಷೇತ್ರದಲ್ಲಿ ತನ್ನ ಕೊಡುಗೆಗಳಿಗಾಗಿ ಪ್ರತಿಷ್ಠಿತ ಡ್ಯಾನ್ ಡೇವಿಡ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ಭೂತ,ವರ್ತಮಾನ ಮತ್ತು ಭವಿಷ್ಯ ಹೀಗೆ ಮೂರು ಆಯಾಮಗಳಲ್ಲಿ ವೈಜ್ಞಾನಿಕ,ತಾಂತ್ರಿಕ ಮತ್ತು ಸಾಂಸ್ಕೃತಿಕ ಸಾಧನೆಗಳಿಗಾಗಿ ಡ್ಯಾನ್ ಡೇವಿಡ್ ಪ್ರತಿಷ್ಠಾನವು ನೀಡುವ ಈ ಪ್ರಶಸ್ತಿಯು ಒಂದು ಮಿಲಿಯನ್ ಡಾಲರ್(7.11 ಕೋ.ರೂ) ನಗದು ಬಹುಮಾನವನ್ನೊಳಗೊಂಡಿದೆ. ಮಾನವತಾವಾದಿ ಡ್ಯಾನ್ ಡೇವಿಡ್ ಅವರ ಹೆಸರಿನಲ್ಲಿ ನೀಡಲಾಗುವ ಈ ಪ್ರಶಸ್ತಿಗಳನ್ನು ಇಸ್ರೇಲ್‌ನ ಟೆಲ್ ಅವಿವ್ ವಿವಿಯು ನಿರ್ವಹಿಸುತ್ತಿದೆ. ಸುಬ್ರಹ್ಮಣ್ಯಂ ಅವರು ಚಿಕಾಗೊ ವಿವಿಯಲ್ಲಿ ಬೋಧಕರಾಗಿರುವ ಖ್ಯಾತ ಇತಿಹಾಸಜ್ಞ ಕೆನೆತ್ ಪೋಮರಾಂಝ್ ಜೊತೆಗೆ ಈ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಮೇ ತಿಂಗಳಲ್ಲಿ ಟೆಲ್ ಅವಿವ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನಿಸಲಾಗುತ್ತದೆ.
ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ ಮತ್ತು ಕೆನಡಾದ ಲೇಖಕ,ಶಿಕ್ಷಣತಜ್ಞ ಹಾಗೂ ಮಾಜಿ ರಾಜಕಾರಣಿ ಮಿಕಾಯೆಲ್ ಇಗ್ನತೀಫ್ ಅವರು ಇತರ ಪ್ರಶಸ್ತಿ ವಿಜೇತರಲ್ಲಿ ಸೇರಿದ್ದಾರೆ.
ಪ್ರಶಸ್ತಿಗೆ ಪಾತ್ರವಾಗಿರುವ ಸುಬ್ರಹ್ಮಣ್ಯಂ ಅವರ ಪ್ರಬಂಧವು 1400-1800 ನಡುವಿನ ಅವಧಿಯಲ್ಲಿ ಏಷ್ಯನ್ನರು, ಐರೋಪ್ಯರು ಹಾಗೂ ಅಮೆರಿಕನ್ ಮೂಲನಿವಾಸಿಗಳು ಮತ್ತು ವಸಾಹತುಶಾಹಿಗಳ ನಡುವಿನ ಮುಖಾಮುಖಿಗಳ ಮೇಲೆ ಗಮನವನ್ನು ಕೇಂದ್ರೀಕರಿಸಿದೆ.





