ಪಾನ್ ಕಾರ್ಡ್‌ಗೆ ಆಧಾರ್ ಜೋಡಣೆ: ಮಾರ್ಚ್ 31 ಅಂತಿಮ ಗಡುವು

ಹೊಸದಿಲ್ಲಿ,ಫೆ.9: ಪಾನ್ ಕಾರ್ಡ್‌ಗೆ ಆಧಾರ್ ಜೋಡಣೆಗೆ ಮಾರ್ಚ್ 31ರ ಗಡುವು ನೀಡಲಾಗಿದ್ದು, ಈ ದಿನಾಂಕದ ಒಳಗಾಗಿ ಹೀಗೆ ಮಾಡಲು ವಿಫಲವಾದಲ್ಲಿ ಪಾನ್ ಕಾರ್ಡ್ ರದ್ದಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದಾಯ ತೆರಿಗೆ ಪಾವತಿಗೆ ಆಧಾರ್ ಕಾರ್ಡ್ ಅನ್ನು ಸರ್ವೋಚ್ಚ ನ್ಯಾಯಾಲಯ ಕಡ್ಡಾಯಗೊಳಿಸಿದ್ದು ಮಾರ್ಚ್ 31ರ ಒಳಗೆ ಪಾನ್ ಜೊತೆ ಆಧಾರ್ ಜೋಡಣೆ ಮಾಡುವಂತೆ ಸೂಚಿಸಿತ್ತು.
ಪಾನ್ ಜೊತೆ ಆಧಾರ್ ಜೋಡಣೆಯ ಅಂತಿಮ ಗಡು ಸಮೀಪಿಸುತ್ತಿದ್ದರೂ ಈವರೆಗೆ ಕೇವಲ 23 ಕೋಟಿ ಮಂದಿ ಮಾತ್ರ ಪಾನ್-ಆಧಾರ್ ಜೋಡಣೆ ಮಾಡಿದ್ದಾರೆ ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿಯ ಮುಖ್ಯಸ್ಥ ಸುಶೀಲ್ ಚಂದ್ರ ತಿಳಿಸಿದ್ದಾರೆ. ಇದರರ್ಥ ಪಾನ್ ಹೊಂದಿರುವ ಶೇ. 50ಕ್ಕಿಂತಲೂ ಅಧಿಕ ಮಂದಿ ಇನ್ನೂ ಆಧಾರ್ ಜೋಡಣೆ ಮಾಡಿಲ್ಲ. ಹಾಗಾಗಿ ನಿಗದಿತ ಸಮಯದ ಒಳಗೆ ಅವರು ಹೀಗೆ ಮಾಡಲು ವಿಫಲವಾದರೆ ಅವರ ಪಾನ್ ಕಾರ್ಡ್ ರದ್ದಾಗುವ ಸಾಧ್ಯತೆಯಿದೆ ಎಂದು ಚಂದ್ರ ತಿಳಿಸಿದ್ದಾರೆ. ಆಧಾರ್ ಜೋಡಣೆಯಿಂದ ನಕಲಿ ಪಾನ್ ಕಾರ್ಡ್ ಇದೆಯೇ ಎನ್ನುವುದು ನಮಗೆ ತಿಳಿಯುತ್ತದೆ. ಒಂದು ವೇಳೆ ನಕಲಿ ಪಾನ್‌ಗಳಿದ್ದರೆ ಮತ್ತು ಅದನ್ನು ಲಿಂಕ್ ಮಾಡದೆ ಇದ್ದರೆ ನಾವು ಅಂಥ ಪಾನ್ ಕಾರ್ಡ್‌ಗಳನ್ನು ರದ್ದುಗೊಳಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಒಮ್ಮೆ ಆಧಾರ್ ಅನ್ನು ಪಾನ್ ಕಾರ್ಡ್‌ಗೆ ಜೊತೆ ಲಿಂಕ್ ಮಾಡಿದರೆ ಅದರ ಜೊತೆ ಜೋಡಣೆಯಾಗಿರು ಬ್ಯಾಂಕ್‌ಗಳಲ್ಲಿ ಸಂಬಂಧಿತ ವ್ಯಕ್ತಿ ನಡೆಸುವ ವ್ಯವಹಾರಗಳ ಮೇಲೆ ನಿಗಾಯಿಡಲು ಆದಾಯ ತೆರಿಗೆ ಇಲಾಖೆಗೆ ಸುಲಭವಾಗುತ್ತದೆ. ಜೊತೆಗೆ ಸರಕಾರದ ಕಲ್ಯಾಣ ಯೋಜನೆಗಳ ಲಾಭವು ಫಲಾನುಭವಿಗಳ ಖಾತೆಗೆ ಬೀಳುತ್ತಿದೆಯೇ ಎಂಬುದನ್ನೂ ತಿಳಿದುಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.