ಉಣ್ಣಿಗಳ ನಿಯಂತ್ರಣಕ್ಕೆ ಇಲಾಖೆಯಿಂದ ವಿಶೇಷ ಕ್ರಮ
ಉಡುಪಿ ಜಿಲ್ಲೆಯಲ್ಲಿ ಶನಿವಾರ ಮತ್ತೆ ಮೂರು ಮಂಗಗಳ ಸಾವು

ಬಸ್ರೂರು ಗ್ರಾಮದಲ್ಲಿ ಆಶಾ ಮತ್ತು ಆರೋಗ್ಯ ಕಾರ್ಯಕರ್ತೆಯರು ಮಂಗನಕಾಯಿಲೆ ಕುರಿತಂತೆ ಗ್ರಾಮಸ್ಥರ ಮನೆಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿರುವುದು.
ಉಡುಪಿ, ಫೆ.9: ಕಳೆದ ಸುಮಾರು ಒಂದು ತಿಂಗಳಿನಿಂದ ಉಡುಪಿ ಜಿಲ್ಲೆಯಲ್ಲಿ ಹೆಚ್ಚುಕಡಿಮೆ 150 ಮಂಗಗಳು ಸತ್ತಿದ್ದರೂ,ಕೇವಲ 12 ಮಂಗಗಳಲ್ಲಿ ಮಾತ್ರ ಮಂಗನಕಾಯಿಲೆ ವೈರಸ್ (ಕೆಎಫ್ಡಿ ವೈರಸ್) ಪತ್ತೆಯಾಗಿದೆ. ಇಷ್ಟರವರೆಗೆ ಒಬ್ಬನೇ ಒಬ್ಬ ಮನುಷ್ಯನಲ್ಲಿ ಕೆಎಫ್ಡಿ ವೈರಸ್ ಸೋಂಕು ಕಾಣಿಸಿಕೊಂಡಿಲ್ಲ. ಆದರೂ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಮಾತ್ರ ವಿಶೇಷ ಪರಿಶ್ರಮವನ್ನು ಕಡಿಮೆಗೊಳಿಸಿಲ್ಲ.
ಇದೀಗ ಇಲಾಖೆ ಕೆಎಫ್ಡಿ ವೈರಸ್ಗಳ ವಾಹಕವಾಗಿರುವ ಮಂಗನ ದೇಹದಲ್ಲಿರುವ ಉಣ್ಣಿಗಳ ನಿಯಂತ್ರಣಕ್ಕೆ ವಿಶೇಷ ಕ್ರಮಕ್ಕೆ ಮುಂದಾಗಿದೆ. ಈ ಉಣ್ಣಿ ಗಳು ಮಂಗ ಸತ್ತ ಪ್ರದೇಶದ ಐದು ಕಿ.ಮೀ.ವ್ಯಾಪ್ತಿಯಲ್ಲಿ ರೋಗವನ್ನು ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಜನರು ಕಾಡು ಪ್ರದೇಶಗಳಿಗೆ ಹೋಗದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಗ್ರಾಮೀಣ ಪ್ರದೇಶಗಳಲ್ಲಿರುವ, ಕಾಡಿನಂಚಿನಲ್ಲಿ ವಾಸಿಸುವ ಜನರಿಗೆ ಎಚ್ಚರಿಕೆ ನೀಡುತಿದ್ದಾರೆ.
ತರಗೆಲೆ ಮನೆಗೆ ತರಬೇಡಿ: ಕರಾವಳಿಯ ಜನರು ಅದರಲ್ಲೂ ಹೆಚ್ಚಾಗಿ ಪಶ್ಚಿಮ ಘಟ್ಟದ ತಪ್ಪಲಲ್ಲಿರುವ ಗ್ರಾಮೀಣ ಪ್ರದೇಶದ ಜನರು ಗೊಬ್ಬರ ತಯಾರಿ ಗಾಗಿ ಹಾಗೂ ದನದ ಕೊಟ್ಟಿಗೆಗೆ ಹಾಕಲು ಮನೆ ಆಸುಪಾಸಿನ ಕಾಡುಗಳಿಂದ ಒಣ ಎಲೆಗಳನ್ನು (ತರಗೆಲೆ, ದರಲೆ) ಸಂಗ್ರಹಿಸಿ ಮನೆಗೆ ತರುತ್ತಾರೆ. ಇದರೊಂದಿಗೆ ಉಣ್ಣಿಗಳು ಬರುವ ಸಾಧ್ಯತೆ ಅತೀ ಹೆಚ್ಚಿರುತ್ತದೆ. ಇದರಿಂದ ಕೆಎಫ್ಡಿ ವೈರಸ್ ಹೊಂದಿರುವ ಉಣ್ಣಿಗಳು ಕಾಡಿನಿಂದ ನೇರವಾಗಿ ನಿಮ್ಮ ಮನೆ ಬಾಗಿಲಿಗೇ ಬರುವಂತಾಗುತ್ತದೆ ಎಂದು ಮಂಗನ ಕಾಯಿಲೆಯ ಜಿಲ್ಲಾ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ಹೇಳುತ್ತಾರೆ.
ಅಲ್ಲದೇ ಕೊಟ್ಟಿಗೆಯಲ್ಲಿರುವ ಬಿರುಕುಗಳು ಇಂಥ ಉಣ್ಣಿಗಳಿಗೆ ಮೊಟ್ಟೆ ಇಟ್ಟು ಮರಿ ಮಾಡಲು ಪ್ರಶಸ್ತ ಸ್ಥಳವಾಗಿರುತ್ತದೆ. ಹೀಗಾಗಿ ಸದ್ಯಕ್ಕೆ ಯಾರು ಕೂಡಾ ಕಾಡಿನಿಂದ ಅಥವಾ ಇಲ್ಲಿ ಸಾಮಾನ್ಯವಾಗಿ ಹೇಳುವ ಹಾಡಿಯಿಂದ ಒಣ ಎಲೆಗಳನ್ನು ಸಂಗ್ರಹಿಸಿ ಮನೆಗೆ ತರಬೇಡಿ ಎಂದವರು ಸಲಹೆ ನೀಡಿದ್ದಾರೆ.
ಕೀಟನಾಶಕ ಸಿಂಪಡಣೆ: ಈ ಮಧ್ಯೆ ಸತ್ತ ಮಂಗಗಳಲ್ಲಿ ವೈರಸ್ ಪತ್ತೆಯಾಗಿರುವ ಪ್ರದೇಶದ ಮನೆಗಳ ಕೊಟ್ಟಿಗೆಯ ಬಿರುಕು, ಸಂದುಗಳಿಗೆ ಕೀಟ ನಾಶಕ ವನ್ನು ಸಿಂಪಡಿಸಲು ಪಶು ವೈದ್ಯಕೀಯ ಇಲಾಖೆ ಒಪ್ಪಿಕೊಂಡಿದ್ದು, ಶೀಘ್ರವೇ ಮನೆಮನೆಗೆ ತೆರಳಿ ಕೀಟ ನಾಶಕವನ್ನು ದನದ ಕೊಟ್ಟಿಗೆಗೆ ಸಿಂಪಡಿಸಲಿದ್ದಾರೆ. ಅಲ್ಲದೇ ಉಣ್ಣಿಗಳ ನಿಯಂತ್ರಣದ ಕುರಿತೂ ಅವರು ಜನರಿಗೆ ಮಾಹಿತಿ ನೀಡಲಿದ್ದಾರೆ ಎಂದರು.
ಅಲ್ಲದೇ ಕಾಡು ಆಸುಪಾಸಿನಲ್ಲಿ ನಡೆದಾಡುವಾಗ, ತರಗೆಲೆ ಇರುವಲ್ಲಿ ದೇಹಪೂರ್ತಿ ಮುಚ್ಚುವಂತೆ ಬಟ್ಟೆ ಧರಿಸುವಂತೆಯೂ ಅವರು ಸಲಹೆ ನೀಡುತ್ತಾರೆ. ಕಾಲಿಗೆ ಚಪ್ಪಲಿಗಿಂತ ಶೂ ಹಾಕುವುದು ಸೂಕ್ತ. ಹಾಗೂ ಮೈಗೆ, ಕೈ-ಕಾಲುಗಳಿಗೆ ಡಿಎಂಪಿ ತೈಲವನ್ನು ಸವರುಕೊಂಡು ಹೋಗುವಂತೆ ತಿಳಿಸಿದ್ದಾರೆ. ಇವೆಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದರಿಂದ ಉಣ್ಣಿ ಇದ್ದರೂ ಅದರಿಂದ ವೈರಸ್ ನಿಮಮ ದೇಹಕ್ಕೆ ಪ್ರವೇಶಿಸದಂತೆ ತಡೆಯುತ್ತದೆ ಎಂದರು.
ಈ ಮಧ್ಯೆ ಜಿಲ್ಲೆಯಾದ್ಯಂತ ಕಾಯಿಲೆ ಕುರಿತಂತೆ ಜನಜಾಗೃತಿ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದೆ. ಇಂದು ರಜಾ ದಿನವಾದರೂ ಆರೋಗ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿ ಜನರಿಗೆ ಕಾಯಿಲೆ ಕುರಿತಂತೆ ಮಾಹಿತಿ ನೀಡಿ, ವಹಿಸಬೇಕಾದ ಎಚ್ಚರಿಕೆ ಕುರಿತು ತಿಳುವಳಿಕೆ ನೀಡಿದ್ದಾರೆ. ವಡ್ಡರ್ಸೆಯಲ್ಲಿ ಮಂಗನಕಾಯಿಲೆ ಕುರಿತು ವಿಶೇಷ ಗ್ರಾಮ ಸಭೆ ನಿನ್ನೆ ನಡೆಯಿತು ಎಂದರು.
ಮಣಿಪಾಲದಲ್ಲಿ 33 ಮಂದಿಗೆ ಚಿಕಿತ್ಸೆ
ಶನಿವಾರ ಉಡುಪಿ ಜಿಲ್ಲೆಯ ಕಾರ್ಕಳದ ತೆಳ್ಳಾರು ರಸ್ತೆ, ಹಳ್ಳಿಹೊಳೆಯ ವಾಟೆಬಚ್ಚಲು ಹಾಗೂ ವಂಡ್ಸೆಯ ಮೊರ್ಟುಗಳಲ್ಲಿ ಸತ್ತ ಮಂಗಗಳು ಪತ್ತೆಯಾಗಿದ್ದು, ಇವುಗಳಲ್ಲಿ ತೆಳ್ಳಾರು ರಸ್ತೆಯಲ್ಲಿ ಸಿಕ್ಕಿದ ಮಂಗನ ಅಟಾಪ್ಸಿ ನಡೆಸಿ ವಿಸೇರಾವನ್ನು ಪರೀಕ್ಷೆಗಾಗಿ ಮಣಿಪಾಲ, ಶಿವಮೊಗ್ಗಗಳಿಗೆ ಕಳುಹಿಸಲಾಗಿದೆ.
ಈವರೆಗೆ ಒಟ್ಟು 53 ಮಂಗಗಳ ಅಟಾಪ್ಸಿ ನಡೆಸಿದ್ದು, ಇವುಗಳಲ್ಲಿ 49ರ ವರದಿ ಬಂದಿವೆ. 12ರಲ್ಲಿ ಮಾತ್ರ ಕೆಎಫ್ಡಿ ವೈರಸ್ ಪತ್ತೆಯಾಗಿದ್ದರೆ, 37ರಲ್ಲಿ ಸೋಂಕು ಪತ್ತೆಯಾಗಿಲ್ಲ. ಇನ್ನು 4ರ ವರದಿ ಬರಬೇಕಾಗಿದೆ. ಜ.19ರ ನಂತರ ಸಿಕ್ಕಿದ ಯಾವುದೇ ಮಂಗನ ದೇಹದಲ್ಲಿ ವೈರಸ್ ಸೋಂಕು ಪತ್ತೆಯಾಗಿಲ್ಲ ಎಂದು ಡಾ. ಭಟ್ ತಿಳಿಸಿದರು. ಈವರೆಗೆ ರಕ್ತ ಪರೀಕ್ಷೆ ನಡೆಸಿದ 29 ಮಂದಿಯಲ್ಲಿ ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ ಎಂದರು.
ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ಆಸುಪಾಸಿನ 178 ಮಂದಿ ಈವರೆಗೆ ಶಂಕಿತ ಮಂಗನಕಾಯಿಲೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಅಲ್ಲದೇ ಎಂಟು ಮಂದಿ ಜ್ವರ ಮರುಕಳಿಸಿದ್ದರಿಂದ ಚಿಕಿತ್ಸೆಗೆ ಬಂದಿದ್ದಾರೆ. ಇವರಲ್ಲಿ 69 ಮಂದಿಯಲ್ಲಿ ಮಾತ್ರ ಸೋಂಕು ಪತ್ತೆಯಾಗಿದ್ದು, 110 ಮಂದಿಯಲ್ಲಿ ಇದ್ದಿರಲಿಲ್ಲ. 7 ಮಂದಿಯ ವರದಿ ಬರಬೇಕಾಗಿದೆ. 151 ಮಂದಿ ಈಗಾಗಲೇ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಗೊಂಡರೆ 33 ಮಂದಿ ಇನ್ನೂ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಕೆಎಂಸಿ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.









