ಬಿಸಿಸಿಐ ಬ್ಯಾರಿ ಮೇಳ: ಗ್ರಾಹಕರ ಆಕರ್ಷಣೆಯ ಕೇಂದ್ರವಾದ ವಸ್ತುಪ್ರದರ್ಶನ-ಮಾರಾಟ ಮಳಿಗೆ

ಮಂಗಳೂರು, ಫೆ. 9: ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಬಿಸಿಸಿಐ) ವತಿಯಿಂದ ನಗರದ ಪುರಭವನದಲ್ಲಿ ನಡೆಯುತ್ತಿರುವ ‘ಬ್ಯಾರಿ ಮೇಳ-2019’ದ ವಸ್ತುಪ್ರದರ್ಶನ ಮತ್ತು ಮಾರಾಟ ಮಳಿಗೆಯು ಶನಿವಾರ ಗ್ರಾಹಕರ ಆಕರ್ಷಣಾ ಕೇಂದ್ರವಾಗಿ ಮಾರ್ಪಟ್ಟಿತ್ತು. ಒಂದೆಡೆ ‘ಫುಡ್‌ಕೋರ್ಟ್’ ಇನ್ನೊಂದೆಡೆ ‘ವಸ್ತುಪ್ರದರ್ಶನ-ಮಾರಾಟ ಮಳಿಗೆ’ಯತ್ತ ಗ್ರಾಹಕರು ಲಗ್ಗೆ ಇಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
ಸುಮಾರು 80ಕ್ಕೂ ಅಧಿಕ ಮಳಿಗೆಗಳಲ್ಲಿ ಬ್ಯಾರಿ ಸಮುದಾಯದ ಪ್ರತಿಷ್ಠಿತ ಬಿಲ್ಡರ್‌ಗಳ ಬಿಲ್ಡಿಂಗ್ ಮತ್ತು ಹಾರ್ಡ್‌ವೇರ್ ಮೆಟೀರಿಯಲ್ಸ್‌ಗಳು ಮತ್ತದರ ಮಾದರಿಗಳು, ಫರ್ನಿಚರ್ಸ್, ಪ್ಲೈವುಡ್ಸ್, ಬ್ಯಾರಿಗಳು ನಡೆಸುವ ಶಿಕ್ಷಣ ಸಂಸ್ಥೆಗಳ ಮಳಿಗೆಗಳಲ್ಲದೆ ಅತ್ತರ್-ಟೊಪ್ಪಿ ಹಾಗೂ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟವಿತ್ತು.
ಮಹಿಳೆಯರ ಅಲಂಕಾರಿಕ ಸಾಮಗ್ರಿಗಳು, ಬ್ಯಾಗ್, ಚಪ್ಪಲಿ, ಶೂ, ಇಲೆಕ್ಟ್ರಾನಿಕ್ಸ್ ಸಾಮಗ್ರಿಗಳು, ಬಟ್ಟೆಬರೆ, ಮದುವೆಯ ಆಮಂತ್ರಣ ಪತ್ರದ ಮಾದರಿ, ಹಜ್ ಮತ್ತು ಉಮ್ರಾ ಟೂರ್ಸ್, ಪೈಂಟಿಂಗ್ಸ್, ಸೈಕಲ್ ಮಾರಾಟ ಮತ್ತು ದುರಸ್ತಿ ಮಳಿಗೆ, ಡ್ರೈಫ್ರೂಟ್ಸ್, ಆರ್ಯುವೇದಿಕ್, ಆಹಾರ ಸಾಮಗ್ರಿಗಳ ಅಂಗಡಿ, ಮೊಬೈಲ್ ಮತ್ತು ಚಿನ್ನಾಭರಣದ ಮಳಿಗೆಯತ್ತ ಗ್ರಾಹಕರು ಸುಳಿದಾಡುತ್ತಿದ್ದರು. ಹಲವರು ಸಾಮಗ್ರಿಗಳನ್ನು ಖರೀದಿಸುತ್ತಿದ್ದರೆ, ಇನ್ನು ಕೆಲವರು ಮಾಹಿತಿ ಪಡೆದುಕೊಳ್ಳುತ್ತಿದ್ದರು. ಮಳಿಗೆಗಳ ಉಸ್ತುವಾರಿ ವಹಿಸಿಕೊಂಡವರು ತಮ್ಮ ಮಳಿಗೆಯತ್ತ ಸುಳಿದಾಡುವ ಗ್ರಾಹಕರಿಗೆ ಪೂರಕ ಮಾಹಿತಿ ನೀಡುವುದರೊಂದಿಗೆ ಹೆಸರು, ಊರು, ಸಂಪರ್ಕ ಸಂಖ್ಯೆ ಇತ್ಯಾದಿಯನ್ನು ವಿವರ ದಾಖಲಿಸಿಕೊಳ್ಳುತ್ತಿದ್ದರು. ಹಲವು ವ್ಯಾಪಾರಿಗಳು ಕೂಡ ಮಳಿಗೆಯತ್ತ ತೆರಳಿ ತಮಗೆ ಬೇಕಾದ ಸಾಮಗ್ರಿಗಳ ಬುಕ್ಕಿಂಗ್ ಆರ್ಡರ್ ನೀಡುತ್ತಿದ್ದುದು ಕಂಡು ಬಂತು.
ರವಿವಾರ ಬೆಳಗ್ಗಿನಿಂದ ರಾತ್ರಿಯವರೆಗೆ ಈ ಎಲ್ಲಾ ಮಳಿಗೆಗಳು ತೆರೆದಿರುತ್ತದೆ ಎಂದು ಬಿಸಿಸಿಐ ಅಧ್ಯಕ್ಷ ಹಾಜಿ ಎಸ್.ಎಂ.ರಶೀದ್ ಹಾಗೂ ಕಾರ್ಯಕ್ರಮದ ಸಂಚಾಲಕ ಮನ್ಸೂರ್ ಅಹ್ಮದ್ ಆಝಾದ್ ತಿಳಿಸಿದ್ದಾರೆ.
ಚಿಕ್ಕಮಗಳೂರಿನ ‘ಭಕ್ತರಹಳ್ಳಿ ಹೋಂಸ್ಟೇ’ ಮಳಿಗೆಯ ಪಾಲುದಾರರಾದ ಶಹೀದ್ ಮತ್ತು ಹಸೀನಾ ದಂಪತಿ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿ ನಾವು ಕೆಲವು ತಿಂಗಳ ಹಿಂದೆ ಈ ಹೋಂ ಸ್ಟೇ ಆರಂಭಿಸಿದೆವು. ಚಿಕ್ಕಮಗಳೂರಿಗೆ ಹಲವು ಮಂದಿ ಪ್ರವಾಸಕ್ಕೆ ಬರುತ್ತಿದ್ದರೂ ಕೂಡ ಅವರಿಗೆ ಹೋಂ ಸ್ಟೇ ಬಗ್ಗೆ ಸೂಕ್ತ ಮಾಹಿತಿ ಇರುವುದಿಲ್ಲ. ಆ ಹಿನ್ನೆಲೆಯಲ್ಲಿ ಊರಿನ ಹೆಸರನ್ನೇ ಹೋಂಸ್ಟೇಗೆ ಇಟ್ಟು ಪ್ರವಾಸಿಗರ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದೇವೆ. ಬ್ಯಾರಿ ಮೇಳದಲ್ಲಿ ಪಾಲ್ಗೊಳ್ಳಲು ಬಿಸಿಸಿಐ ನಮಗೊಂದು ಅವಕಾಶ ನೀಡಿರುವುದರಿಂದ ಮಳಿಗೆಯತ್ತ ಬರುವ ಗ್ರಾಹಕರಿಗೆ ಪೂರಕ ಮಾಹಿತಿ ನೀಡಲು ಸಾಧ್ಯವಾಗಿದೆ ಎಂದರು.
‘ಬ್ಯಾರೀಸ್ ಗಾಟ್ ಟ್ಯಾಲೆಂಟ್’: ಶನಿವಾರ ಸಂಜೆ ‘ಬ್ಯಾರೀಸ್ ಗಾಟ್ ಟ್ಯಾಲೆಂಟ್’ ಎಂಬ ಪ್ರತಿಭಾ ಪ್ರದರ್ಶನ ಜರುಗಿತು. ಎರಡು ಹಂತದಲ್ಲಿ ನಡೆದ ಸ್ಪರ್ಧೆಯಲ್ಲಿ ಹಾಡು, ಭಾಷಣ, ಜಾದೂ ಇತ್ಯಾದಿ ಪ್ರತಿಭೆಯನ್ನು ಪ್ರದರ್ಶಿಸಿದರು. ಟಿಆರ್‌ಎಫ್ ಸಲಹೆಗಾರ ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.
ಕಲಾವಿದರಾದ ಖಾಲಿದ್ ಉಜಿರೆ, ಖಾಲಿದ್ ತಣ್ಣೀರುಬಾವಿ, ರಿಯಾಝ್ ಕಲಾಕರ್ ತೀರ್ಪುಗಾರರಾಗಿ ಸಹಕರಿಸಿದ್ದರು. ಬಳಿಕ ಬ್ಯಾರಿ ಕಲಾರಂಗದ ಅಧ್ಯಕ್ಷ ಅಝೀಝ್ ಬೈಕಂಪಾಡಿ ನೇತೃತ್ವದಲ್ಲಿ ಬ್ಯಾರಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.



















