ರಾಜ್ಯ ಸರಕಾರದ್ದು ‘ಐಸ್‌ಕ್ಯಾಂಡಿ’ ಬಜೆಟ್: ಬಿಜೆಪಿ ವ್ಯಂಗ್ಯ
ಮಂಗಳೂರು, ಫೆ.9: ಕೇಂದ್ರ ಬಜೆಟ್ ‘ಬೊಂಬಾಯಿ ಮಿಠಾಯಿಯಾ?’ ಎಂದು ಕೇಳಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ ಮಂಡಿಸಿದ ರಾಜ್ಯ ಬಜೆಟ್ ‘ಐಸ್‌ಕ್ಯಾಂಡಿ’ ಎಂದು ಶಾಸಕ ಹಾಗೂ ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ವ್ಯಂಗ್ಯವಾಡಿದ್ದಾರೆ.
ಶನಿವಾರ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ದ.ಕ.ಜಿಲ್ಲೆಯಲ್ಲಿ 56,000 ಅಡಕೆ ಬೆಳೆಗಾರರು ಕೊಳೆರೋಗ ಪರಿಹಾರಕ್ಕೆ ಅರ್ಜಿ ಸಲ್ಲಿಸಿ ಕಾಯುತ್ತಿದ್ದರೂ ಕೂಡ ಇನ್ನೂ ಯಾವುದೇ ಪರಿಹಾರ ಸಿಕ್ಕಿಲ್ಲ. ಮುಂಗಡ ಪತ್ರದಲ್ಲೂ ಉಲ್ಲೇಖವಿಲ್ಲ. ಮೀನುಗಾರರಿಗೆ ಡೀಸೆಲ್ ಸಬ್ಸಿಡಿ ಪ್ರಕಟಿಸಿದ್ದರೂ ಕೂಡ ಧಕ್ಕೆ ನಿರ್ಮಾಣ, ಹೂಳೆತ್ತುವುದು, ತಡೆಗೋಡೆ ಇತ್ಯಾದಿ ಬಗ್ಗೆ ಗಮನಹರಿಸಿಲ್ಲ ಎಂದು ಆರೋಪಿಸಿದರು.
ಗತ ಮುಂಗಡ ಪತ್ರದಲ್ಲಿ ಜಾರಿಗೊಳಿಸಿದ್ದ ಪಶ್ಚಿಮವಾಹಿನಿ ಯೋಜನೆ ಈ ಸಲ ಬಜೆಟ್‌ನಲ್ಲಿ ಕಾಣಿಸಿಲ್ಲ. ಎಂಡೋಸಲ್ಪಾನ್ ಸಂತ್ರಸ್ತರಿಗೆ ಯಾವುದೇ ರೀತಿಯ ಪ್ಯಾಕೇಜ್ ಇಲ್ಲ. ವಸತಿ ಯೋಜನೆಯ ಗುರಿ ಕೂಡ ಹೇಳಿಕೆಗೆ ಸೀಮಿತವಾಗಲಿದೆ ಎಂದ ಸಂಜೀವ ಮಠಂದೂರು, ದ.ಕ.ಜಿಲ್ಲೆಗೆ ಬಿಜೆಪಿಯ ಏಳು ಶಾಸಕರಿ ದ್ದಾರೆ ಎಂಬ ಕಾರಣಕ್ಕೆ ಅನುದಾನ ಬಿಡುಗಡೆಯಲ್ಲಿ ಸರಕಾರ ತಾರತಮ್ಯ ಮಾಡಿದೆ. ಇದೀಗ ಬಜೆಟ್‌ನಲ್ಲೂ ಜಿಲ್ಲೆಗೆ ತಾರತಮ್ಯ ಮಾಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್, ಪಕ್ಷದ ಮುಖಂಡರಾದ ಕಿಶೋರ್ ರೈ, ಕ್ಯಾ.ಬ್ರಿಜೇಶ್ ಚೌಟ ಉಪಸ್ಥಿತರಿದ್ದರು.







