ಶಿರಾಲಿಯ ವೆಂಕಟೇಶ ಪ್ರಭು ಗುಂಡಿಲ್ ನಿಧನ

ಭಟ್ಕಳ, ಫೆ. 9: ಶಿರಾಲಿಯ ವೆಂಕಟೇಶ ಪ್ರಭು ಗುಂಡಿಲ್ (68) ಇವರು ಅಲ್ಪ ಕಾಲದ ಅಸೌಖ್ಯದಿಂದ ಮಣಿಪಾಲ ಆಸ್ಪತ್ರೆಯಲ್ಲಿ ಶನಿವಾರ ಬೆಳಗಿನ ಜಾವ ನಿಧನ ಹೊಂದಿದರು.
ಹಲವಾರು ಮಠ ಮಂದಿಗಳ ಜೀರ್ಣೋದ್ಧಾರಕ್ಕೆ ಕಾರಣೀಕರ್ತರಾದ ಇವರು ಶ್ರೀ ಪರ್ತಗಾಳಿ ಜೀವೋತ್ತಮ ಮಠದ ವಿದ್ಯಾಧಿರಾಜ ತೀರ್ಥ ಶ್ರೀ ವಡೇರ ಸ್ವಾಮೀಜಿವರ ಆಪ್ತ ಶಿಷ್ಯರಲ್ಲಿ ಓರ್ವರಾಗಿದ್ದರು.
ಸಹಕಾರಿ ರಂಗದಲ್ಲಿ ತೊಡಗಿಸಿಕೊಂಡಿದ್ದ ಇವರು ಶ್ರೀ ಮಾರುತಿ ಸಹಕಾರಿ ಪತ್ತಿನ ಸಂಘದ ಹಿರಿಯ ನಿರ್ದೇಶಕರು. ತಾಲೂಕಾ ವರ್ತಕರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮೃತರು ತಾಯಿ, ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ವೆಂಕಟೇಶ ಪ್ರಭು ಅವರ ನಿದನದ ಸುದ್ದಿ ತಿಳಿದು ಶಿರಾಲಿ ಹಾಗೂ ಭಟ್ಕಳ ನಗರದಲ್ಲಿ ಅನೇಕ ಅಂಗಡಿಗಳನ್ನು ಬಂದ್ ಮಾಡಿ ಅವರಿಗೆ ಗೌರವ ಸಲ್ಲಿಸಲಾಯಿತು.
ಮೃತರ ಅಂತಿಮ ದರ್ಶನವನ್ನು ಸಾವಿರಾರು ಜನರು ಪಡೆದುಕೊಂಡಿದ್ದು ಶಾಸಕ ಸುನಿಲ್ ನಾಯ್ಕ, ಮಾಜಿ ಶಾಸಕರಾದ ಜೆ.ಡಿ.ನಾಯ್ಕ, ಮಂಕಾಳ ಎಸ್. ವೈದ್ಯ, ಮಾರುತಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅಶೋಕ ಪೈ, ಪ್ರಮುಖರಾದ ವರ್ತಕರ ಸಂಘದ ಎಂ.ಎಸ್. ಮೊಹತೆಶಮ್, ಪದ್ಮನಾಭ ಪೈ, ಮಹಮ್ಮದ್ ಇಕ್ಬಾಲ್, ಮಹಮ್ಮದ್ ಅಸ್ಲಂ, ಮಂಜುನಾಥ ಪ್ರಭು, ಶ್ರೀ ಕೃಷ್ಣಾ ಮಿಲ್ಸ್ಕ್‍ನ ಪುತ್ತು ಪೈ, ಜಿ.ಎಸ್.ಬಿ. ಸಮಾಜದ ಶಿರಾಲಿ ಅಧ್ಯಕ್ಷ ಡಿ.ಜೆ.ಕಾಮತ್, ಭಟ್ಕಳ ಅಧ್ಯಕ್ಷ ಹರಿಶ್ಚಂದ್ರ ಕಾಮತ್, ಕಾಮತ್ ಹೋಟೆಲ್ಸ್‍ನ ಆರ್. ಆರ್. ಕಾಮತ್ ಸೇರಿದಂತೆ ಅನೇಕರು ಆಗಮಿಸಿದ್ದರು. ದಕ್ಷಿಣ ಕನ್ನಡ, ಉಡುಪಿ, ಹುಬ್ಬಳ್ಳಿಯಿಂದ ವ್ಯಾಪಾರಸ್ಥರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು.







