ಬ್ಲಡ್ ಡೊನರ್ಸ್ ಮಂಗಳೂರು: ಐದನೇ ವರ್ಷದ ಸಂಭ್ರಮ
ಬಡ ಕುಟುಂಬಕ್ಕೆ ಆಶ್ರಯ ಯೋಜನೆಯ ಶಿಲಾನ್ಯಾಸ ಕಾರ್ಯಕ್ರಮ

ಮುಡಿಪು, ಫೆ. 9: ಬ್ಲಡ್ ಡೊನರ್ಸ್ ಮಂಗಳೂರು ಇದರ ಐದನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಬಡ ಕುಟುಂಬಕ್ಕೆ ಆಶ್ರಯ ಒದಗಿಸುವ ಯೋಜನೆಯ ಶಿಲಾನ್ಯಾಸ ಕಾರ್ಯಕ್ರಮ ಶುಕ್ರವಾರ ಮುಡಿಪುವಿನಲ್ಲಿ ನಡೆಯಿತು.
ಸ್ಥಳೀಯ ಗೌಸಿಯಾ ಜುಮಾ ಮಸೀದಿಯ ಖತೀಬ್ ಆಸಿಫ್ ಸಖಾಫಿ ದುವಾಶೀರ್ವಚನದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬ್ರೈಟ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಜಲೀಲ್ ಬ್ರೈಟ್ ಮಾತನಾಡಿ ಬ್ಲಡ್ ಡೋನರ್ಸ್ ಯುವಕರ ಅವಿರತ ಪರಿಶ್ರಮದಿಂದ ಐದು ಸಂವತ್ಸರಗಳನ್ನು ಯಶಸ್ವಿಯಾಗಿ ಪೂರೈಸಿ ಮುನ್ನಡೆಯುವುದು ಶ್ಲಾಘನೀಯ ವಿಚಾರವೆಂದು ಪ್ರಸ್ತಾಪಿಸುತ್ತಾ ಹಾದಿ ತಪ್ಪುತ್ತಿರುವ ನವ ಯುವ ಸಮೂಹದ ಮಧ್ಯೆ ಸಾಮಾಜಿಕ ಕಳಕಳಿಯ ಚೈತನ್ಯವನ್ನು ಬಿತ್ತರಿಸುವ ಈ ಯುವಪಡೆ ಸಮಾಜದ ನೈಜ ಕಾವಳುಗಾರರು ಎಂದು ಬಣ್ಣಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಇನ್ನೋರ್ವ ಮುಖ್ಯ ಅತಿಥಿ ತಾಲೂಕು ಪಂಚಾಯತ್ ಸದಸ್ಯರಾದ ಹೈದರ್ ಕೈರಂಗಳ ಮಾತನಾಡಿ ಬ್ಲಡ್ ಡೋನರ್ಸ್ ಎಂಬ ರಕ್ತಸಂಬಂಧಿಗಳ ತಂಡ ನಿಂತ ನೀರಾಗದೆ ಹರಿಯುವ ನದಿಯಂತೆ ಮುನ್ನುಗ್ಗುತ್ತಿರುವುದಕ್ಕೆ ಈ ಐದನೇ ವರ್ಷದ ಸಂಭ್ರಮಾಚರಣೆಯೇ ಸಾಕ್ಷಿಯೆಂದು ತಿಳಿಸಿ ಪಂಚಮ ವಾರ್ಷಿಕವನ್ನು ಅರ್ಹ 3 ಬಡ ಕುಟುಂಬಗಳಿಗೆ ಸೂರೊಂದನ್ನು ನಿರ್ಮಿಸಿ ಕೊಡುವ ಕಾರ್ಯ ನಿಜಕ್ಕೂ ಶ್ಲಾಘನೀಯ ಹಾಗೂ ಪ್ರಶಂಶನೀಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಬ್ಲಡ್ ಡೋನರ್ಸ್ ಮಂಗಳೂರು ಇದರ ಅಧ್ಯಕ್ಷರಾದ ಸಿದ್ದೀಕ್ ಮಂಜೇಶ್ವರ ಮಾತನಾಡಿ ತಂಡದ ಕಾರ್ಯೋನ್ಮುಖ ಚಟುವಟಿಕೆಗಳ ಬಗ್ಗೆ ತಿಳಿಸುತ್ತಾ ಬ್ಲಡ್ ಡೋನರ್ಸ್ ನಡೆದು ಬಂದ ಹಾದಿಯ ಬಗ್ಗೆ ವಿವರಿಸಿ ಮುಂದಿನ ಯೋಚನೆಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗೌಸಿಯಾ ಜುಮಾ ಮಸೀದಿಯ ಅಧ್ಯಕ್ಷರಾದ ಕುಂಞಿ ಬಾವ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಬಶೀರ್ ಮುಡಿಪು ಮತ್ತು ಸಿದ್ದೀಕ್ ಕೆ ಎಚ್, ನವಾಝ್ ಕೊಲ್ಲರಕೋಡಿ, ಫಾರೂಕ್ ಬಿಗ್ ಗೇರೆಜ್, ಸಲಾಂ ಚೆಂಬುಗುಡ್ಡೆ, ಮುನೀರ್ ಚೆಂಬುಗುಡ್ಡೆ, ಫಯಾಝ್ ಮಾಡೂರು ಹಾಗೂ ಇತರರು ಉಪಸ್ಥಿತರಿದ್ದರು.
ಬ್ಲಡ್ ಡೋನರ್ಸ್ ಮಂಗಳೂರು ಇದರ ಕಾರ್ಯ ನಿರ್ವಾಹಕರಾದ ಸಿರಾಜ್ ಪಜೀರ್ ಸ್ವಾಗತಿಸಿ, ರಝಾಕ್ ಸಾಲ್ಮರ ವಂದಿಸಿದರು.












