ಕೊರಗ ಸಮುದಾಯದ ಸಾಮೂಹಿಕ ವಿವಾಹ: 15 ಜೋಡಿ ವಿವಾಹಕ್ಕೆ ಸಾಕ್ಷಿಯಾದ ಸಮುದಾಯದ ಜನ
ಹಸೆಮಣೆ ಏರಿದ ಪಿಎಚ್‌ಡಿ ಶಿಕ್ಷಣಾರ್ಥಿ

ಮಂಗಳೂರು, ಫೆ.10: ಕಾಸರಗೋಡನ್ನು ಒಳಗೊಂಡು ಅವಿಭಜಿತ ದ.ಕ. ಜಿಲ್ಲೆಯ ಮೂಲ ನಿವಾಸಿಗಳಾಗಿರುವ ಕೊರಗ ಸಮುದಾಯಕ್ಕೆ ಇಂದು ಸಂತಸ, ಸಂಭ್ರಮದ ದಿನ. ಅಳಿವಿನಂಚಿನಲ್ಲಿರುವ ಸಮುದಾಯವಾಗಿ ಗುರುತಿಸಲ್ಪಟ್ಟಿರುವ ಕೊರಗ ಸಮುದಾಯದ ಐದು ಮನೆತನಗಳ ಕುಟುಂಬಸ್ಥರು ನಗರದ ಕೋಡಿಕಲ್‌ನ ಕುದ್ಮುಲ್ ರಂಗ ರಾವ್ ಕೊರಗ ಸಮುದಾಯ ಭವನದಲ್ಲಿ ಒಟ್ಟು ಸೇರಿದ್ದರು.
ಸಮುದಾಯದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಇಂದು 15 ಜೋಡಿ ನವ ವಧು ವರರು ದಾಂಪತ್ಯ ಜೀವನಕ್ಕೆ ಕಾಲಿರಿಸುವ ಮೂಲಕ ಹೊಸ ದಾಖಲೆಯನ್ನು ಬರೆದರು.
ಕೊರಗ ಸಮುದಾಯದ ಐಕಳ, ಬಳ್ಕುಂಜ, ಮಡುಂಬು, ಬಜಿಲೊಟ್ಟು, ಕಾಪು ಮೂಲ ಮನೆತನಕ್ಕೆ ಸೇರಿದ ಕಾಸರಗೋಡು, ಉಡುಪಿ ಹಾಗೂ ದ.ಕ. ಜಿಲ್ಲೆಯ ಒಟ್ಟು 15 ಜೋಡಿ ವಧು ವರರು ಇಂದು ಕೊರಗ ಸಾಂಪ್ರದಾಯಿಕ ರೀತಿಯಲ್ಲಿ ಕುಟುಂಬದ ಮುಖ್ಯಸ್ಥರ ಉಪಸ್ಥಿತಿಯಲ್ಲಿ ಸತಿ-ಪತಿಗಳಾದರು.
ಪ್ರಕೃತಿಯನ್ನೇ ಆರಾಧಿಸುವ, ಹೆಣ್ಣಿನ ಸಮಾನತೆ ಒತ್ತು ನೀಡುವ ಕೊರಗ ಸಮುದಾಯದಲ್ಲಿ ವಿವಾಹವೆಂದರೆ ಅದು ಹೆಣ್ಣು- ಗಂಡು ಪರಸ್ಪರನ್ನು ಆಯ್ಕೆ ಮಾಡಿಕೊಂಡು ಒಟ್ಟಾಗಿ ಜೀವನ ಸಾಗಿಸುವುದು. ಹೆತ್ತವರ ಆಶೀರ್ವಾದವನ್ನು ಹೊರತುಪಡಿಸಿದರೆ, ಸಮುದಾಯದಲ್ಲಿ ತಾಳಿ ಕಟ್ಟುವುದು, ಪೌರೋಹಿತ್ಯದ ಮಾಂಗಲ್ಯಧಾರಣೆಗೆ ಯಾವುದೇ ಮಹತ್ವವಿಲ್ಲ. ಮಾತ್ರವಲ್ಲದೆ, ಹಸೆಮಣೆ ಏರಲು ಘಳಿಗೆ, ಗೋತ್ರ, ದಿನ ಯಾವುದಕ್ಕೂ ಪ್ರಾಧ್ಯಾನ್ಯತೆ ನೀಡಲಾಗುವುದಿಲ್ಲ. ತಮ್ಮ ಬಿಡುವು, ಸಂದರ್ಭಕ್ಕೆ ಅನುಗುಣವಾಗಿ ದಿನ ನಿಗದಿಪಡಿಸಿಕೊಂಡು ಜೋಡಿಗಳಾಗುತ್ತಾರೆ. ವರದಕ್ಷಿಣೆ ಎಂಬ ಪದವೇ ಕೊರಗ ಸಮುದಾಯದಲ್ಲಿಲ್ಲ.
ಆದರೆ ನಾಗರಿಕತೆಯೊಂದಿಗೆ ನಗರಗಳಲ್ಲಿ ಕೊರಗ ಸಮುದಾಯದ ವಾಸ್ತವ್ಯ ವ್ಯಾಪಿಸಿದಂತೆಯೇ ಇಲ್ಲಿನ ಜಾತಿಗಳಲ್ಲಿ ನಡೆಯುವ ವಿವಾಹ ಸಂಪ್ರದಾಯ ಗಳನ್ನು, ಆಡಂಬರಗಳನ್ನೂ ಸಮುದಾಯ ಮೈಗೂಡಿಸಿಕೊಂಡು ಬಂದಿದೆ. ಸಮಾಜದ ಇತರ ಸಮುದಾಯಗಳಂತೆ ತಾಳಿ ಕಟ್ಟುವ ಪದ್ಧತಿಯನ್ನೂ ಅಳವಡಿಸಿಕೊಳ್ಳಲಾಗಿದೆಯಾದರೂ, ಪೌರೋಹಿತ್ಯದ ವಿವಿಧ ವಿಧಾನಗಳಿಗೆ ಅವಕಾಶವಿಲ್ಲವಾಗಿದೆ. ಬಾಲ್ಯ ವಿವಾಹ ಸಾಮಾನ್ಯವಾಗಿದ್ದ ಸಮುದಾಯದಲ್ಲಿ ಇಂದು ಬಾಲ್ಯ ವಿವಾಹವನ್ನು ತಡೆಹಿಡಿಯಲಾಗಿದೆ.
ಇಂತಹ ವ್ಯವಸ್ಥೆಯಲ್ಲಿ, ತಮ್ಮ ಸಮುದಾಯದ ಕಟ್ಟುಪಾಡನ್ನು ಉಳಿಸಿ ಸಂರಕ್ಷಿಸುವ ಜತೆಗೆ ಸಮುದಾಯದ ಯುವ ಪೀಳಿಗೆಯನ್ನು ಸರಳ ಹಾಗೂ ಸಾಂಪ್ರದಾಯಿಕ ವಿವಾಹಕ್ಕೆ ಪ್ರೇರೇಪಿಸುವ ಉದ್ದೇಶದಿಂದ ಸಮುದಾಯವು ಇದೇ ಮೊದಲ ಬಾರಿಗೆ ಕೊರಗ ಸಾಮೂಹಿಕ ವಿವಾಹ ಸಮಿತಿ ಮೂಲಕ ಇಂದು ಸಾಮೂಹಿಕ ವಿವಾಹ ಸಮಾರಂಭವನ್ನು ಆಯೋಜಿಸಿತ್ತು. ಈ ಸಮಾರಂಭದಲ್ಲಿ ಕಾಸರಗೋಡಿನ ಒಂದು, ದ.ಕ. ಹಾಗೂ ಉಡುಪಿ ಜಿಲ್ಲೆಯ ತಲಾ 7 ಜೋಡಿ ಸತಿಪತಿಗಳಾದರು.
ತಮ್ಮ ಕುಟುಂಬಸ್ಥರೊಂದಿಗೆ ಬೆಳಗ್ಗೆ ಸುಮಾರು 9.30ರ ವೇಳೆಗೆ ಕೋಡಿಕಲ್ ಕುದ್ಮುಲ್ ರಂಗರಾವ್ ಕೊರಗ ಸಮುದಾಯ ಭವನಕ್ಕೆ ಆಗಮಿಸಿದ ವಧು ವರರನ್ನು ಕೊರಗ ಸಮುದಾಯದ ಡೋಲು, ಕೊಳಲು ವಾದನದೊಂದಿಗೆ ಬರಮಾಡಿಕೊಳ್ಳಲಾಯಿತು. ಬಳಿಕ ಸಾಂಪ್ರದಾಯಿಕ ರೀತಿಯಲ್ಲಿ ಹೆಣ್ಣಿನ ಮನೆಯವರು ತಮ್ಮ ಹೆಣ್ಣು ಮಗಳನ್ನು ಗಂಡಿಗೆ ದಾರೆ ಎರೆದು ಕೊಡುವ ಮೂಲಕ ವಿವಾಹವನ್ನು ನೆರವೇರಿಸಲಾಯಿತು.
ದಾರೆ ಮಣಿ (ಮಣಿ ಸರ)ದ ಜತೆ ತಾಳಿ ಕಟ್ಟುವ ಮೂಲಕ ವಿವಾಹವನ್ನು ಸಂಪನ್ನಗೊಳಿಸಲಾಯಿತು.ಪಾಡ್ದನ ಮೂಲಕ ವಧು ವರರಿಗೆ ಹಿತವಚನವನ್ನು ನೀಡಲಾಯಿತು. ಬಳಿಕ ವಧುವರರಿಗೆ ಕುಟುಂಬಸ್ಥರು, ಸೇರಿದವರು ಸೇಸೆ ಹಾಕುವ (ಕಳಸದಲ್ಲಿ ಇರಿಸಲಾದ ಅಕ್ಕಿಯನ್ನು ವಧು ವರ ತಲೆಗೆ ಹಾಕುವುದು) ಮೂಲಕ ದಾಂಪತ್ಯ ಜೀವನಕ್ಕೆ ಶುಭ ಕೋರಿದರು. ಬಂದಿದ್ದವರಿಗೆ (ಸುಮಾರು 2500 ಮಂದಿಗೆ ಊಟದ) ಸಸ್ಯಹಾರಿ ಹಾಗೂ ಮಾಂಸಾಹಾರಿ ಊಟದ ವ್ಯವಸ್ಥೆಯನ್ನು ಕೂಡಾ ಮಾಡಲಾಗಿತ್ತು.
ಸಾಮಾಜಿಕವಾಗಿ ತೀರಾ ಹಿಂದುಳಿದಿರುವ ಹಾಗೂ ವಿನಾಶದ ಅಂಚಿನಲ್ಲಿರುವ ಕೊರಗ ಸಮುದಾಯವನ್ನು ಈ ಸಾಮೂಹಿಕ ವಿವಾಹವು ಒಟ್ಟುಗೂಡಿಸುವ ವೇದಿಕೆಯಾಗಿಯೂ ಮಾರ್ಪಟ್ಟಿದ್ದು ವಿಶೇಷ. ಸಮಾಜದಲ್ಲಿನ ಇಂದಿನ ಆಡಂಬರದ ವಿವಾಹಗಳಿಗೆ ಒಗ್ಗಿರುವ ಸಮುದಾಯವನ್ನು ಸರಳ ವಿವಾಹದತ್ತ ಆಕರ್ಷಿಸುವ ಉದ್ದೇಶ ಈ ಸಾಮೂಹಿಕ ವಿವಾಹದ ಮೂಲಕ ನೆರವೇರಿದೆ’’ ಎಂದು ಕೊರಗ ಸಮುದಾಯ ಶಿಕಲಾ ಕೋಡಿಕಲ್ ಅಭಿಪ್ರಾಯಿಸಿದ್ದಾರೆ.
‘‘ನಮ್ಮ ಸಮುದಾಯದಲ್ಲಿ ಮದುಮಗಳ ಮನೆಗೆ ಮದುಮಗ ದಿಬ್ಬಣ ತರುವುದು ಸಂಪ್ರದಾಯ. ಅದರಂತೆ ಇಂದು ಕೋಡಿಕಲ್‌ನ ಕುದ್ಮುಲ್ ರಂಗರಾವ್ ಸಭಾಭವನವನ್ನು ವಧುವಿನ ಮನೆಯಾಗಿಸಿ ಸಾಮೂಹಿಕ ವಿವಾಹ ಸಮಾರಂಭವನ್ನು ಆಯೋಜಿಸಿದ್ದೇವೆ’’ ಎಂದು ಕೊರಗ ಸಮುದಾಯದ ರಮೇಶ್ ಕುಂದಾಪುರ ಹೇಳಿದರು.
ಖರ್ಚುವೆಚ್ಚಕ್ಕೆ ಕಡಿವಾಣ ಹಾಕುವ ಉದ್ದೇಶ
‘‘ಹಿಂದೆಲ್ಲಾ ಐದು ದಿನಗಳ ಕಾಲ ನಮ್ಮ ಮದುವೆ ಸಂಪ್ರದಾಯ ನಡೆಯುತ್ತಿತ್ತು. ಮುಖ್ಯವಾಗಿ ನಮ್ಮಲ್ಲಿ ಹೆಣ್ಣಿನ ಮನೆತನಕ್ಕೆ ಹೆಚ್ಚು ಪ್ರಾಶಸ್ತ್ಯ ಹೆಚ್ಚು. ಜೋಡಿಯಾಗಿ ಬದುಕಲು ಬಯಸುವ ಹೆಣ್ಣು ಗಂಡಿಗೆ ತೆಂಗಿನ ಮರದ ಬುಡದಲ್ಲಿ ಮನೆಯವರು ಐದು ಕೊಡ ನೀರನ್ನು ಹಾಕಿ ದಾರೆ ಎರೆಯುವ ಸಂಪ್ರದಾಯ ನಡೆಯುತ್ತಿತ್ತು. ಬಳಿಕ ಮದುವೆಯ ಹಿಂದಿನ ದಿನ ದಾರೆಮಣಿಗಳನ್ನು ನೀಡಲಾಗುತ್ತಿತ್ತು. ಇದೀಗ ತಾಳಿ ಕಟ್ಟುವ ಸಂಪ್ರದಾಯವನ್ನು ಅನುಸರಿಸುತ್ತಿದ್ದೇವೆ.
ಮಾತ್ರವಲ್ಲದೆ ಇತ್ತೀಚಿನ ದಿನಗಳಲ್ಲಿ ಮದುವೆಗೆ ಮಾಡಲಾಗುವ ಖರ್ಚುವೆಚ್ಚಕ್ಕೆ ಕಡಿವಾಣ ಹಾಕಿ ಸರಳ ವಿವಾಹವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಸಾಮೂಹಿಕ ವಿವಾಹವನ್ನು ನಡೆಸಲಾಗಿದೆ’’ ಎಂದು ಇಂದಿನ ವಿವಾಹ ಸಮಿತಿಯ ಅಧ್ಯಕ್ಷ ಎಂ. ಸುಂದರ ಕಡಂದಲೆ ಅಭಿಪ್ರಾಯಿಸಿದರು.
ಕೊರಗ ಸಮುದಾಯ ಹಿರಿಯ ನಾಯಕ, ಹೋರಾಟಗಾರ ಗೋಕುಲ್‌ದಾಸ್ ನಾಯಕ್ ಅವರು ಈ ಸಾಮೂಹಿಕ ವಿವಾಹಕ್ಕೆ ಸಾಕ್ಷಿಯಾದರೆ, ಮಾಜಿ ಸಚಿವ ರಮಾನಾಥ ರೈ, ಮನಪಾ ಮುಖ್ಯ ಸಚೇತಕ ಶಶಿಧರ ಹೆಗ್ಡೆ ಜತೆ, ಚಿಂತಕರು, ಬರಹಗಾರರು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ವಧು- ವರರನ್ನು ಆಶೀರ್ವದಿಸಿದು.
ಮನಪಾ ಮೇಯರ್ ಭಾಸ್ಕರ ಕೆ., ಆಯುಕ್ತ ಮುಹಮ್ಮದ್ ನಝೀರ್, ತಹಶೀಲ್ದಾರ್ ಗುರುಪ್ರಸಾದ್ ಸಮಾರಂಭದಲ್ಲಿ ಭಾಗವಹಿಸಿದ್ದರು.
ಸರಳ- ಸಾಮೂಹಿಕ ವಿವಾಹ ಸಮಾಜಕ್ಕೆ ಮಾದರಿ
‘‘ಕೊರಗ ಸಮುದಾಯ ಸಮಾಜದಲ್ಲಿ ತೀರಾ ಹಿಂದುಳಿದಿರುವಂತದ್ದು. ಆರ್ಥಿಕವಾಗಿ ಅನುಕೂಲಸ್ಥರು ಆಡಂಬರದ ವಿವಾಹಗಳಿಗೆ ಒತ್ತು ನೀಡುವ ಈ ಸಂದರ್ಭದಲ್ಲಿ ಸುಶಿಕ್ಷಿತರಾಗುತ್ತಿರುವ ಸಮುದಾಯದಲ್ಲಿ ಸರಳ- ಸಾಮೂಹಿಕ ವಿವಾಹವು ಸಮಾಜಕ್ಕೆ ಮಾದರಿ’’ ಎಂದು ನವ ವಿವಾಹಿತ ಅಣ್ಣಿ ಕೋಡಿಕಲ್ ಹೇಳಿದರು.
ಹಂಪಿ ವಿಶ್ವವಿದ್ಯಾನಿಲಯದಿಂದ ‘ಕೊರಗ ತನಿಯ ಮತ್ತು ವರ್ತಮಾನದ ಮುಖಾಮುಖಿ’ ಎಂಬ ವಿಷಯದಲ್ಲಿ ಪಿಎಚ್‌ಡಿ ಅಧ್ಯಯನ ನಡೆಸುತ್ತಿರುವ ಅಣ್ಣಿಯವರು ಬಿಎ ಪದವೀಧರೆ, ಲೇಡಿಗೋಶನ್ ಆಸ್ಪತ್ರೆಯಲ್ಲಿ ಸಿಬ್ಬಂದಿಯಾಗಿರುವ ಶೋಭಾರನ್ನು ಇಂದಿನ ಸಮಾರಂಭದಲ್ಲಿ ವಿವಾಹವಾದರು.
ದೇಣಿಗೆಯೇ ಖರ್ಚುವೆಚ್ಚಕ್ಕೆ ಮೂಲಾಧಾರ !
ಇಂದಿನ ವಿವಾಹಕ್ಕೆ ಸುಮಾರು ಏಳೂವರೆ ಲಕ್ಷ ರೂ.ಗಳನ್ನು ವ್ಯಯಿಸಲಾಗಿದೆ. ಮಂಗಳೂರು ಮಹಾನಗರ ಪಾಲಿಕೆಯು 3.80 ಲಕ್ಷ ರೂ.ಗಳನ್ನು ನೀಡಿದ್ದರೆ. ಉಳಿದ ಹಣವನ್ನು ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಸಮುದಾಯದವರು ಹಾಗೂ ಇತರ ದೇಣಿಗೆಯ ಮೂಲಕ ಭರಿಸಲಾಗಿದೆ. ಮಂಗಳೂರು ತಾಲೂಕು ತಹಶೀಲ್ದಾರ್ ಗುರುಪ್ರಸಾದ್‌ರವರು 15 ಮಂದಿ ವಧುವಿಗೆ ತಲಾ 1 ಗ್ರಾಂ.ನ ತಾಳಿಯನ್ನು ನೀಡಿದ್ದಾರೆ. ನಗರದ ಉಡುಪಿನ ಸಂಸ್ಥೆಯೊಂದು 15 ಸೀರೆಗಳನ್ನು ಕೊಡುಗೆಯಾಗಿ ನೀಡಿದೆ.
- ಎಂ. ಸುಂದರ ಕಡಂದಲೆ, ಅಧ್ಯಕ್ಷರು, ಕೊರಗ ಸಾಮೂಹಿಕ ವಿವಾಹ ಸಮಿತಿ.












