‘ನಿಜವಾದ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದು ಜಾಜ್ ಫೆರ್ನಾಂಡಿಸ್’

ಉಡುಪಿ, ಫೆ.10: ಕರ್ನಾಟಕ ರಾಜ್ಯ ಕ್ರೈಸ್ತ ಸಂಘಟನೆಗಳ ಅಂತಾರಾಷ್ಟ್ರೀಯ ಒಕ್ಕೂಟ ಉಡುಪಿ ಜಿಲ್ಲೆ ಇದರ ವತಿಯಿಂದ ಕೇಂದ್ರದ ಮಾಜಿ ಸಚಿವ ಜಾರ್ಜ್ ಫೆರ್ನಾಂಡಿಸ್ ಅವರಿಗೆ ನುಡಿನಮನ ಕಾರ್ಯಕ್ರಮವನ್ನು ಉದ್ಯಾವರದ ಸಂತ ಫ್ರಾನ್ಸಿಸ್ ಜೇವಿಯರ್ ಸಭಾಭವನದಲ್ಲಿ ಆಯೋಜಿಸಲಾಗಿತ್ತು.
ದೊಡ್ಡಣಗುಡ್ಡೆಯ ಬಾಳಿಗಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಪಿ.ವಿ.ಭಂಡಾರಿ ಮಾತನಾಡಿ, ಇಂದು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಕೇಂದ್ರ ಸರಕಾರ ದೊಡ್ಡ ಪ್ರಚಾರ ನೀಡುತ್ತಿವೆ. ಆದರೆ ನಿಜವಾದ ಸರ್ಜಿಕಲ್ ಸ್ಟ್ರೈಕ್ ಮಾಡಿದವರು ಜಾರ್ಜ್ ಫೆರ್ನಾಂಡಿಸ್. ಆದರೆ ಅವರು ಯಾವತ್ತೂ ಈ ಬಗ್ಗೆ ಪ್ರಚಾರವನ್ನೇ ಮಾಡಲಿಲ್ಲ. ಓರ್ವ ಕಾರ್ಮಿಕ ನಾಯಕನಾಗಿ, ದೇಶದಾದ್ಯಂತ ಕೆಚ್ಚೆದೆಯ ಹೋರಾಟ ಮಾಡಿ ಕಾರ್ಮಿಕರ ಧ್ವನಿಯಾಗಿದ್ದರು ಎಂದು ಹೇಳಿದರು.
ಉಡುಪಿ ಕ್ರೆಸ್ತ ಧರ್ಮಪ್ರಾಂತ್ಯದ ಕುಲಪತಿ ವಂ.ಫಾ.ಸ್ಟ್ಯಾನಿ ಬಿ.ಲೋಬೊ, ರೈಲ್ವೇ ಯಾತ್ರಿ ಸಂಘದ ಅಧ್ಯಕ್ಷ ಆರ್.ಎಲ್. ಡಾಯಸ್, ಸಮಾಜ ಸೇವಕಿ ವೆರೋನಿಕಾ ಕರ್ನೇಲಿಯೋ, ಇಫ್ಕಾ ಗೌರವಾಧ್ಯಕ್ಷ ಲೂವಿಸ್ ಲೋಬೋ ನುಡಿ ನಮನ ಸಲ್ಲಿಸಿದರು. ಸಿರಿಲ್ ಡಿಮೆಲ್ಲೋ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇಪ್ಕಾ ಅಧ್ಯಕ್ಷ ನೇರಿ ಕರ್ನೆಲಿಯೊ ಸ್ವಾಗತಿಸಿದರು. ಸ್ಟೀವನ್ ಕುಲಾಸೊ ಉದ್ಯಾವರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.





