ಪ್ರಧಾನಿ ಸ್ವೀಕರಿಸಿದ್ದ 1,800ಕ್ಕೂ ಸ್ಮರಣಿಕೆಗಳ ಹರಾಜು ಪೂರ್ಣ
ಹರಾಜಿನ ಹಣ ಗಂಗಾ ಶುದ್ಧೀಕರಣಕ್ಕೆ ಬಳಕೆ
![ಪ್ರಧಾನಿ ಸ್ವೀಕರಿಸಿದ್ದ 1,800ಕ್ಕೂ ಸ್ಮರಣಿಕೆಗಳ ಹರಾಜು ಪೂರ್ಣ ಪ್ರಧಾನಿ ಸ್ವೀಕರಿಸಿದ್ದ 1,800ಕ್ಕೂ ಸ್ಮರಣಿಕೆಗಳ ಹರಾಜು ಪೂರ್ಣ](/images/placeholder.jpg)
ಹೊಸದಿಲ್ಲಿ,ಫೆ.10: ಪ್ರಧಾನಿ ನರೇಂದ್ರ ಮೋದಿ ಅವರು ಸ್ವೀಕರಿಸಿದ್ದ 1,800ಕ್ಕೂ ಅಧಿಕ ಸ್ಮರಣಿಕೆಗಳನ್ನು ಹರಾಜು ಮಾಡಲಾಗಿದೆ. ಹರಾಜಿನಿಂದ ಎಷ್ಟು ಹಣ ಸಂಗ್ರಹವಾಗಿದೆ ಎನ್ನುವುದು ಸ್ಪಷ್ಟವಾಗಿಲ್ಲ.
ಹರಾಜಿನಿಂದ ಸಂಗ್ರಹವಾಗಿರುವ ಮೊತ್ತವು ಗಂಗಾ ನದಿಯನ್ನು ಶುದ್ಧಗೊಳಿಸಲು ಸರಕಾರವು ಹಮ್ಮಿಕೊಂಡಿರುವ ‘ನಮಾಮಿ ಗಂಗೆ’ ಯೋಜನೆಗೆ ಬಳಕೆಯಾಗಲಿದೆ ಎಂದು ಪ್ರಧಾನಿ ಕಚೇರಿಯು ರವಿವಾರ ತಿಳಿಸಿದೆ.
ಇಲ್ಲಿಯ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ನಲ್ಲಿ ಕಳೆದ ತಿಂಗಳು ಆರಂಭಗೊಂಡು 15 ದಿನಗಳ ಕಾಲ ನಡೆದ ಹರಾಜು ಪ್ರಕ್ರಿಯೆಯಲ್ಲಿ ಕೈಯಿಂದ ನಿರ್ಮಿಸಲಾದ ಕಟ್ಟಿಗೆಯ ಬೈಕ್ ಮತ್ತು ರೈಲ್ವೆ ಪ್ಲಾಟ್ ಫಾರ್ಮ್ ನಲ್ಲಿ ಮೋದಿಯವರಿದ್ದ ವರ್ಣ ಕಲಾಕೃತಿ ತಲಾ ಐದು ಲಕ್ಷ ರೂ.ಗಳಿಗೆ ಮಾರಾಟವಾಗಿವೆ. ಹರಾಜಾದ ಇತರ ವಸ್ತುಗಳಲ್ಲಿ 5,000 ರೂ.ಗಳ ಮೂಲಬೆಲೆಯನ್ನು ಹೊಂದಿದ್ದ ಶಿವನ ವಿಗ್ರಹ 10 ಲ.ರೂ.ಗೆ ಮತ್ತು 4,000 ರೂ.ಮೂಲಬೆಲೆ ಹೊಂದಿದ್ದ ಆಶೋಕ ಸ್ತಂಭದ ಪ್ರತಿಕೃತಿ 13 ಲ.ರೂ.ಗೆ ಮಾರಾಟವಾಗಿವೆ. 2,000 ರೂ.ಮೂಲಬೆಲೆ ಹೊಂದಿದ್ದ ಅಸ್ಸಾಂ ರಾಜ್ಯದ ಸಾಂಪ್ರದಾಯಿಕ ಚಿಹ್ನೆ ‘ಹೋರಾಯ್’ 12 ಲ.ರೂ.ಗಳಿಗೆ ಮತ್ತು 4,000 ರೂ.ಮೂಲಬೆಲೆಯ ಗೌತಮ ಬುದ್ಧನ ವಿಗ್ರಹ ಏಳು ಲ.ರೂ.ಗೆ ಮಾರಾಟಗೊಂಡಿವೆ.
ಮೋದಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗಲೂ ತಾನು ಸ್ವೀಕರಿಸಿದ್ದ ಸ್ಮರಣಿಕೆಗಳನ್ನು ಹರಾಜು ಮಾಡಿ ಹಣವನ್ನು ಹೆಣ್ಣುಮಕ್ಕಳ ಶಿಕ್ಷಣಕ್ಕೆ ನೀಡಿದ್ದರು ಎಂದು ಪ್ರಧಾನಿ ಕಚೇರಿಯು ತಿಳಿಸಿದೆ.