ಸಮಾನ ವೇತನಕ್ಕಾಗಿ ಆಗ್ರಹಿಸಿ ಹೊರಗುತ್ತಿಗೆ ನೌಕರರ ಸಂಘದಿಂದ ಧರಣಿ
ಬೆಂಗಳೂರು, ಫೆ.10: ಸಮಾನ ವೇತನ ಮತ್ತು ಸೇವಾ ಭದ್ರತೆ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸಂಘದ ಸದಸ್ಯರು ಸ್ವಾತಂತ್ರ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಎಚ್.ವೈ.ವಿಶ್ವಾರಾಧ್ಯ, ಇಲಾಖೆ ಸಿಬ್ಬಂದಿಗೆ 30 ಸಾವಿರ ರೂ. ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ 8 ರಿಂದ 10 ಸಾವಿರ ರೂ. ವೇತನ ನೀಡುತ್ತಿದ್ದಾರೆ. ವೇತನದಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಇದರಿಂದ ಜೀವನ ಸಾಗಿಸುವುದು ಕಷ್ಟಕರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ದೆಹಲಿ ಸರಕಾರವು ಎಲ್ಲ ಬಗೆಯ ಗುತ್ತಿಗೆ ನೌಕರರಿಗೆ ಮತ್ತು ಹರಿಯಾಣ ಸರಕಾರವು ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯ ಗುತ್ತಿಗೆ ನೌಕರರಿಗೆ ಘನತೆಯ ವೇತನ ಹಾಗೂ ಸೇವಾ ಭದ್ರತೆ ಒದಗಿಸಲು ಕ್ರಮಕೈಗೊಂಡಿದೆ. ಇದೇ ರೀತಿಯ ಮಾದರಿಯನ್ನು ಅನುಸರಿಸಿ, ನಮ್ಮ ರಾಜ್ಯದಲ್ಲೂ ಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ನೀಡುವ ಕೆಲಸ ಮಾಡಬೇಕಾಗಿದೆ ಎಂದು ಒತ್ತಾಯಿಸಿದರು.
ಜೀತ ಪದ್ಧತಿಯ ಪರಿಷ್ಕೃತ ರೂಪದಂತಿರುವ ಗುತ್ತಿಗೆ ಪದ್ಧತಿಯೇ ಅಸಂವಿಧಾನಿಕವಾಗಿದೆ. ತಮ್ಮ ಜೀವಮಾನದ ಅಮೂಲ್ಯವಾದ ಯೌವ್ವನಾವಸ್ಥೆಯಲ್ಲಿ ದುಡಿಯುವ ಕಾರ್ಮಿಕರನ್ನು ನಂತರದ ವರ್ಷಗಳಲ್ಲಿ ಕೆಲಸದಿಂದ ತೆಗೆದುಹಾಕುವುದು ಅಮಾನವೀಯ. ಮಾದರಿ ಉದ್ಯೋಗದಾತರಾಗಿರಬೇಕಾದ ಸರಕಾರವೇ ಇಂತಹ ಪದ್ಧತಿಯನ್ನು ಅಳವಡಿಸಿಕೊಂಡರೇ ಹೇಗೆ ಎಂದು ಪ್ರಶ್ನಿಸಿದರು.
ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಒಳಗುತ್ತಿಗೆ ನೌಕರರನ್ನು ಹೊರಗುತ್ತಿಗೆಗೆ ದೂಡಬಾರದು, ಹಾಲಿ ಗುತ್ತಿಗೆ ವ್ಯವಸ್ಥೆಯಲ್ಲಿರುವ ಹುದ್ದೆಗಳನ್ನು ಖಾಯಂ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.







