ಸಮಾಜ ಕಾರ್ಯ ಜಾತಿ-ಪಂಥವಿಲ್ಲದೆ ನಡೆಯಬೇಕು: ಡಾ.ನಿರ್ಮಲಾನಂದನಾಥ ಸ್ವಾಮಿ

ಬೆಂಗಳೂರು, ಫೆ.10: ಸಮಾಜ ಕಾರ್ಯ ಯಾವಾಗಲೂ ಜಾತಿ-ಪಂಥವಿಲ್ಲದೆ ನಡೆಯಬೇಕು. ಸಮುದಾಯ ಎಂಬುವುದು ಕೇವಲ ನೆಪ ಅಷ್ಟೇ ಎಂದು ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮಿ ಅಭಿಪ್ರಾಯಟ್ಟಿದ್ದಾರೆ.
ರವಿವಾರ ಬನಶಂಕರಿಯ ಭುವನೇಶ್ವರಿ ಒಕ್ಕಲಿಗರ ಮಹಿಳಾ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಸಮುದಾಯವನ್ನು ಮೀರಿ ವ್ಯಕ್ತಿ ಬೆಳೆದು ಸಮಾಜದ ಸೇವೆಯನ್ನು ನಿಸ್ವಾರ್ಥವಾಗಿ ಮಾಡಬೇಕು. ಆಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಒಂದು ಮರ ಭೂಮಿಯಿಂದ ಹಲವನ್ನು ಪಡೆದು ಮಾನವ ಸಮುದಾಯಕ್ಕೆ ಎಲ್ಲವನ್ನೂ ನೀಡುತ್ತದೆ. ಅದೇ ರೀತಿಯಲ್ಲಿ ನಮ್ಮ ಕಾರ್ಯ ಇರಬೇಕು ಎಂದು ಹೇಳಿದರು.
ಒಳ್ಳೆಯ ಕೆಲಸಗಳನ್ನು ಮಾಡುವಾಗ ಅವಮಾನ, ತೆಗಳಿಕೆ ಬರುತ್ತವೆ. ತಾಳ್ಮೆಯಿಂದ ಅವುಗಳೆಲ್ಲವನ್ನು ಸಹಿಸಿಕೊಂಡು ನಡೆಯಬೇಕು. ತಾಳ್ಮೆ ಇದಿದ್ದರಿಂದಲೇ ಮದರ್ ತೇರೆಸಾ ಸಾಧನೆ ಮಾಡಿದರು. ಅಂತವರ ದಾರಿಯಲ್ಲಿ ನಾವು ಸಾಗಬೇಕು ಎಂದು ಸಲಹೆ ನೀಡಿದರು.
ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಾತನಾಡಿ, ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಉತ್ತಮ ಸಾಧನೆ ಮಾಡುತ್ತಿದ್ದು, ಪುರುಷರಷ್ಟೇ ನಾವು ಸಮರ್ಥರು ಎಂಬುವುದನ್ನು ತೋರ್ಪಡಿಸುತ್ತಿದ್ದಾರೆ. ಈ ಹಿಂದೆ ಮೇಯರ್ ಪಟ್ಟ ನನಗೆ ಒಲಿದು ಬಂದಾಗ ಕೇವಲ 2 ಬಾರಿ ಆಯ್ಕೆಯಾದ ಇವರು ಉತ್ತಮ ಆಡಳಿ ನೀಡುತ್ತಾರೆಯೇ ಎಂಬ ಅನುಮಾನಗಳಿದ್ದವು. ಆದರೆ ಹಿಂಜರಿಕೆಯನ್ನು ಮೆಟ್ಟಿನಿಂತು ಅಧಿಕಾರ ನಡೆಸುತ್ತಿದ್ದೇನೆ. ಈ ಕ್ಷೇತ್ರದಲ್ಲಿ ಜನಮೆಚ್ಚುವ ಕೆಲಸ ಮಾಡುವುದಾಗಿ ಹೇಳಿದರು.
ಸಂಸ್ಥಾನ ಒಕ್ಕಲಿಗರಿಗೆ ಸೀಮಿತವಲ್ಲ:
‘ಆದಿಚುಂಚನಗಿರಿ ಸಂಸ್ಥಾನ ಒಕ್ಕಲಿಗ ಜಾತಿಗೆ ಸೀಮಿತವಾಗಿಲ್ಲ. ಎಲ್ಲ ಧರ್ಮದವರು ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಎಲ್ಲರನ್ನೂ ಮಹಾಸಂಸ್ಥಾನ ಮಾತೃ ವಾತ್ಸಲ್ಯದಿಂದ ನೋಡುತ್ತದೆ’
-ಡಾ.ನಿರ್ಮಲಾನಂದನಾಥ ಸ್ವಾಮಿ, ಆದಿಚುಂಚನಗಿರಿ ಮಠ






.jpg)

