ಪ್ರಯೋಗಾತ್ಮಕ ಬರಹದಿಂದ ಉತ್ತಮ ಕವಿತೆ ಸೃಷ್ಟಿ: ಸಾಹಿತಿ ಕೆ.ವೈ.ನಾರಾಯಣಸ್ವಾಮಿ
ಬೆಂಗಳೂರು, ಫೆ.10: ಪ್ರಯೋಗಾತ್ಮಕ ಬರಹಗಳಿಂದ ಉತ್ತಮ ಕವಿತೆಗಳು ಹೊರಬರಲು ಸಾಧ್ಯವಾಗುತ್ತದೆ ಎಂದು ಸಾಹಿತಿ ಹಾಗೂ ಪ್ರಾಧ್ಯಾಪಕ ಕೆ.ವೈ.ನಾರಾಯಣಸ್ವಾಮಿ ಹೇಳಿದ್ದಾರೆ.
ರವಿವಾರ ಬಸವನಗುಡಿ ಇಂಡಿಯನ್ ಇನ್ಸಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನ ಬಿ.ಪಿ.ವಾಡಿಯಾ ಸಬಾಂಗಣದಲ್ಲಿ ಆಯೋಜಿಸಿದ್ದ ಕವಯತ್ರಿಗಳಾದ ಎನ್.ಸಂಧ್ಯಾರಾಣಿ ಹಾಗೂ ಬಿ.ವಿ.ಭಾರತಿ ಅವರ ಕವನ ಸಂಕಲನ ‘ಆನು ನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯಾ’ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕವಿತೆ ಬರೆಯುತ್ತೇವೆ ಎನ್ನುವುವವರೆಲ್ಲಾ ಕವಿಯಾಗಲ್ಲ, ಬರೆಯುವುದೆಲ್ಲವೂ ಕಾವ್ಯವಾಗಲ್ಲ. ಒಂದು ಕವಿತೆ ಸೃಷ್ಟಿಯಾಗಬೇಕಾದರೆ ಹಲವಾರು ಪ್ರಯತ್ನಗಳು ಮಾಡಬೇಕಾಗುತ್ತದೆ. ಸಾರ್ಥಕ ಸಾಲುಗಳಿಂದ ಉತ್ತಮ ಕವಿತೆಯ ಹುಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಸಾಹಿತ್ಯ ಪ್ರಕಾರಗಳು ಸಾಮಾಜಿಕ, ಪ್ರಾದೇಶಿಕ ಚರಹೆಗಳಿಂದ ರೂಪುಗೊಂಡಿವೆ. ಆದರೆ ಕವಿತೆ ವ್ಯಕ್ತಿಗತವಾದದ್ದು. ಅಪಟ್ಟ ಮನುಷ್ಯನ ಕುರಿತು, ಅವರ ಅನುಭವ, ಅನುಭೂತಿ ಇವೆಲ್ಲವನ್ನೂ ಕವಿತೆಯಲ್ಲಿ ಕಾಣಬಹುದು ಎಂದು ಹೇಳಿದರು.
ಪ್ರತಿಯೊಬ್ಬ ಲೇಖಕ, ಕವಿ, ಸಾಹಿತಿ ಸೇರಿದಂತೆ ಎಲ್ಲರೂ ನಾವು ಉತ್ತಮ, ಅತ್ಯುತ್ತಮ ಬರಹಗಾರರಾಗಬೇಕು ಎಂದು ಬಯಸಿ ಬರೆಯುತ್ತಾರೆ. ಇನ್ನೂ ಕೆಲವರಿಗೆ ನಾನು ರಚಿಸುವ ಕವಿತೆಯಿಂದ ಅಥವಾ ಬರಹದಿಂದ ಸಮಾಜಕ್ಕೆ ಏನಾದರೂ ಸಂದೇಶ ನೀಡಬೇಕು ಎಂದು ಬಯಸುತ್ತಾರೆ. ಈ ನಿಟ್ಟಿನಲ್ಲಿ ಸಂಧ್ಯಾರಾಣಿ ಹಾಗೂ ಬಿ.ವಿ.ಭಾರತಿ ಅವರ ಕವಿತೆಗಳು ಭಾವನಾತ್ಮಕ ಸಂಗತಿಗಳನ್ನು ಕಟ್ಟಿಕೊಟ್ಟಿವೆ ಎಂದರು.
ವಿಮರ್ಶಕ ಅಬ್ದುಲ್ ರಶೀದ್ ಮಾತನಾಡಿ, ಹಲವು ಸಾಹಿತಿಗಳು ಹಾಗೂ ಬರಹಗಾರರು ಗಂಭೀರತೆಯಲ್ಲಿ ತಮ್ಮ ಸಮಯವನ್ನು ಕಳೆಯುತ್ತಾರೆ. ಆದರೆ, ಅತಿಹೆಚ್ಚು ಗಂಭೀರವಾಗಿರುವ ಬದಲು ಸಮಾಜದೊಂದಿಗೆ ತೊಡಗಿಸಿಕೊಳ್ಳುವ ಮೂಲಕ ನೆಮ್ಮದಿಯ ಜೀವನ ನಡೆಸಬೇಕು ಎಂದು ನುಡಿದರು.
ಕವಿತೆಯು ಒಂದು ಕ್ಷಣದಲ್ಲಿ ಹುಟ್ಟುತ್ತವೆ ಅಥವಾ ಧೀರ್ಘ ಸಮಯವನ್ನು ಪಡೆಯುತ್ತವೆ. ಆದರೆ, ಅದು ಉತ್ತಮವಾದ ಕವಿತೆಯಾಗಲು ಪ್ರಯೋಗಕ್ಕೆ ಒಳಪಡಬೇಕು. ಆಗ ಅದು ಸಂಪೂರ್ಣ ಕವಿತೆಯಾಗುತ್ತದೆ ಎಂದ ಅವರು, ಸಂಧ್ಯಾರಾಣಿ ಹಾಗೂ ಭಾರತಿ ಸೇರಿ ಒಂದು ಕವನ ಸಂಕಲನ ಮಾಡಿದ್ದಾರೆ. ಕನ್ನಡದ ಮಹಿಳಾ ಸಾಹಿತ್ಯ ಲೋಕದಲ್ಲಿ ಇದೊಂದು ಹೊಸ ಪ್ರಯೋಗ ಎಂದು ಹೇಳಿದರು. ಸಮಾರಂಭದಲ್ಲಿ ಕವಯತ್ರಿಯರಾದ ಎನ್.ಸಂಧ್ಯಾರಾಣಿ, ಬಿ.ವಿ.ಭಾರತಿ ಮತ್ತಿತರರು ಉಪಸ್ಥಿತರಿದ್ದರು.







