ವೈಚಾರಿಕತೆ ನೆಲೆಗಟ್ಟು ಸಂವಿಧಾನದಲ್ಲೇ ಇದೆ: ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು
ಬೆಂಗಳೂರು, ಫೆ.10: ವೈಜ್ಞಾನಿಕ ಮನೋಭಾವ ಹಾಗೂ ವೈಚಾರಿಕತೆಯ ನೆಲೆಗಟ್ಟನ್ನು ಭದ್ರಗೊಳಿಸುವ ಅಂಶಗಳನ್ನು ಸಂವಿಧಾನದಲ್ಲೇ ಕಾಣಬಹುದಾಗಿದೆ ಎಂದು ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ರಾಜಾಜಿನಗರದ ಎಂಇಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಆಯೋಜಿಸಿದ್ದ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವೈಚಾರಿಕತೆಯ ಜ್ಞಾನವನ್ನು ಇಂದಿನ ಪೀಳಿಗೆಯವರಲ್ಲಿ ತುಂಬುವ ಮೂಲಕ ಸಮಾಜದ ಸ್ವಾಸ್ಥಕ್ಕೆ ಶ್ರಮಿಸಬೇಕಾದ ಅಗತ್ಯವಿದ್ದು, ಸಂವಿಧಾನದ ಕಾರ್ಯವೂ ಈ ಹಿನ್ನೆಲೆಯನ್ನೇ ಹೊಂದಿದೆ ಎಂದು ಹೇಳಿದರು.
ವಿಚಾರವಾದಿಗಳಾದ ನರೇಂದ್ರ ದಾಬೋಲ್ಕರ್, ಗೋವಿಂದ ಪನ್ಸಾರೆ, ಡಾ. ಎಂ.ಎಂ.ಕಲಬುರ್ಗಿ ಹಾಗೂ ಗೌರಿ ಲಕೇಶ್‌ರಂತಹವರು ನಮ್ಮ ದೇಶಕ್ಕೆ ಬೇಡ. ನಾವು ಹೇಳಿದನ್ನು ಕೇಳಿಸಿಕೊಂಡು ಬದುಕಿ ಎಂಬ ವರ್ಗ ದೇಶದಲ್ಲಿ ಬಲಿಷ್ಠವಾಗುತ್ತಿದೆ. ವಾಸ್ತವ ನೆಲೆಯಲ್ಲಿ ಚಿಂತನೆ ಮಾಡುವರನ್ನು ಮನೆಗೆ ಹೋಗಿ ಕೊಂದಿರುವುದನ್ನು ನೆನೆದರೆ, ಲೇಖಕನಾದ ನನಗೆ ನಮ್ಮ ಮನೆಗೆ ಬರುವವರೆಲ್ಲರನ್ನೂ ಅನುಮಾನದಿಂದ ನೋಡುವಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ರಾಜಪ್ರಭುತ್ವದ ಹುಚ್ಚಾಟಗಳಂತೆ ರಾಜಕೀಯ ನಾಯಕರ ಹುಚ್ಚಾಟ ದಿನೇ ದಿನೆ ಹೆಚ್ಚುತ್ತಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದ್ದಾರೆ. ಅಲ್ಲದೆ, ದೇಶವು 20- 30 ವರ್ಷ ಮುಂದಕೆ ಚಲಿಸದೆ ಹಿಂದಕ್ಕೆ ಚಲಿಸುತ್ತಾ ಅವೈಜ್ಞಾನಿಕ ಅಂಶಗಳನ್ನು ಜನರಲ್ಲಿ ನಂಬಿಸುವ ಕೆಲಸ ಮಾಡಲಾಗುತ್ತಿದೆ. ದೆಹಲಿಯ ವಿಜ್ಞಾನ ಸಮ್ಮೇಳನದಲ್ಲಿ ನಡೆದ ಬೆಳವಣಿಗೆಯನ್ನು ಗಮನಿಸಿದರೆ, ವೈಚಾರಿಕತೆ ಮರೆಸುವ ಹುನ್ನಾರವನ್ನು ನೋಡಬಹುದು ಎಂದು ತಿಳಿಸಿದರು.
ವೈಜ್ಞಾನಿಕ ಹಾಗೂ ವೈಚಾರಿಕ ಪುಸ್ತಕಗಳು ರಾಜ್ಯದಲ್ಲಿ ಹೆಚ್ಚು ಮಾರಾಟ ಆಗುತ್ತಿದ್ದು, ಜನರಲ್ಲಿ ಈ ವಿಷಯಗಳ ಕುರಿತು ಯೋಚಿಸೋಕೆ ಮನಸ್ಸಿದೆ ಎಂಬುದನ್ನು ಬಿಂಬಿಸುತ್ತದೆ. ಮಾಧ್ಯಮಗಳು ವೈಚಾರಿಕತೆಯನ್ನು ಬೆಳೆಸಲು ಶ್ರಮಿಸಬೇಕು. ಆದರೆ, ಅದರ ಬದಲು ಅವೈಜ್ಞಾನಿಕ ಅಂಶಗಳನ್ನು ಜನರಲ್ಲಿ ತುಂಬುತ್ತಿವೆ. ಇನ್ನು, ಇಸ್ರೋ ಅಧ್ಯಕ್ಷರೆ ತಿರುಪತಿಗೆ ಹೋಗಿ ಬರುತ್ತಾರೆಂದರೆ ವೈಜ್ಞಾನಿಕತೆಯ ಅಜ್ಞಾನ ತಿಳಿಯುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಶಿಕ್ಷಣದ ವಸ್ತುಸ್ಥಿತಿಯನ್ನು ಅರ್ಥ ಮಾಡಿಕೊಂಡು ಸರಕಾರಗಳು ಎಲ್ಲ ವರ್ಗದವರಿಗೂ ಸಲ್ಲುವ ಶಿಕ್ಷಣವನ್ನು ನೀಡಬೇಕು. ಜಾಗತೀಕರಣದಿಂದ ಎಲ್ಲ ಪ್ರಾದೇಶಿಕ ಭಾಷೆಗಳು ನರಳುತ್ತಿವೆ. ಜಪಾನ್, ಯುರೋಪ್ ರಾಷ್ಟ್ರಗಳು ತನ್ನ ನೆಲದ ಭಾಷೆಯಲ್ಲೇ ಮಾತೃ ಭಾಷಾ ಶಿಕ್ಷಣವನ್ನು ನೀಡುತ್ತಾ ಅಭಿವೃದ್ಧಿಯಾಗಿವೆ ಎಂದರು. ಎಂಇಎಸ್ ಸಂಸ್ಥೆಯ ಕಾರ್ಯದರ್ಶಿ ಡಾ.ಶಕುಂತಲಾ ಕತ್ರೆ, ಪ್ರಾಂಶುಪಾಲ ಪ್ರೊ. ಮೈಥಿಲಿ ರಾಜು ಉಪಸ್ಥಿತರಿದ್ದರು.
‘ವಿಜ್ಞಾನ ಶಿಕ್ಷಕರೆ ಗ್ರಹಣ, ಸುನಾಮಿ, ಆಕಾಶಕಾಯ ಹಾಗೂ ಭೂಮಂಡಲದ ಸೃಷ್ಠಿಯ ವೈಜ್ಞಾನಿಕ ಅಂಶಗಳನ್ನು ಬೋಧಿಸಿ, ಚಂದ್ರ-ಸೂರ್ಯ ಗ್ರಹಣದ ದಿನ ರಜೆ ಹಾಕಿ ಮನೆಯಲ್ಲಿ ಪೂಜೆ ಮಾಡುತ್ತಾ ಕುಳಿತಿರುತ್ತಾರೆ’
-ಕೋ.ವೆಂ.ರಾಮಕೃಷ್ಣೇಗೌಡ, ಸಾಹಿತಿ







