ದುರ್ಬಲಗೊಂಡ ಭಾರತದ ದೃಷ್ಟಿಕೋನವನ್ನು ಬಲಪಡಿಸುವುದು ಇಂದಿನ ಅಗತ್ಯ: ಪುತ್ತಿಗೆ ಶ್ರೀ

ಉಡುಪಿ, ಫೆ.10: ಇಂದು ಇಡೀ ಜಗತ್ತು ಭಾರತದ ದೃಷ್ಠಿಕೋನದ ಕಡೆ ನೋಡುತ್ತಿದೆ. ಆದರೆ ಭಾರತ ಮಾತ್ರ ದುರ್ಬಲಗೊಳ್ಳುತ್ತಿದೆ. ಆದುದರಿಂದ ಭಾರತದ ದೃಷ್ಠಿಕೋನವನ್ನು ಬಲಪಡಿಸುವ ಕಾರ್ಯ ಆಗಬೇಕು. ಭಾರತ ಸೃಧಡ ಗೊಂಡರೆ ಇಡೀ ಜಗತ್ತು ಬಲಗೊಳ್ಳಲು ಸಾಧ್ಯ ಎಂದು ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿಯ ಯಕ್ಷಗಾನ ಕಲಾರಂಗ ಇದರ ವಿದ್ಯಾಪೋಷಕ್ ಘಟಕದ ವತಿಯಿಂದ ಅಂಬಲಪಾಡಿ ಶ್ರೀಜನಾರ್ದನ ಮತ್ತು ಮಹಾಕಾಳಿ ದೇವಳದ ಆಶ್ರಯದಲ್ಲಿ ದೇವಸ್ಥಾನದ ಭವಾನಿ ಮಂಟಪದಲ್ಲಿ ಆಯೋಜಿಸಲಾದ ಪ್ರಥಮ ಪಿಯುಸಿ ಮುಗಿಸಿದ ವಿದ್ಯಾಪೋಷಕ್ ಫಲಾನುಭವಿಗಳಿಗೆ ಐದು ದಿನಗಳ ಸನಿವಾಸ ಶಿಬಿರವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ತಪ್ಪು ದೃಷ್ಟಿಕೋನವು ಇಂದಿನ ಜಗತ್ತಿನ ಬಹಳ ದೊಡ್ಡ ಸಮಸ್ಯೆಯಾಗಿದೆ. ತಪ್ಪು ದೃಷ್ಟಿಕೋನ ಬಿತ್ತಿದ ಪರಿಣಾಮವಾಗಿ ನಾವು ಇಂದು ಜೀವನದ ಕೊನೆಯಲ್ಲಿ ನಿರಾಸೆ ಅನುಭವಿಸುತ್ತಿದ್ದೇವೆ. ಆದುದರಿಂದ ಜೀವನದ ಬಗ್ಗೆ ಸರಿಯಾದ ದೃಷ್ಟಿ ಕೋನ ಹಾಗೂ ತಿಳುವಳಿಕೆ ಮೂಡಿಸುವ ಕಾರ್ಯ ನಮ್ಮ ವ್ಯವಸ್ಥೆ ಹಾಗೂ ಶಿಕ್ಷಣ ಪದ್ಧತಿಯಿಂದ ಅಗತ್ಯವಾಗಿ ಆಗಬೇಕಾಗಿದೆ ಎಂದರು.
ಯಕ್ಷಗಾನವು ಸಮಗ್ರ ಜೀವನಕ್ಕೆ ಸಂಬಂಧಿಸಿದ ಕಲೆಯಾಗಿದೆ. ಜೀವನ ನೈಪುಣ್ಯ ಎಂಬುದು ಬಹಳ ದೊಡ್ಡ ಕಲೆಯಾಗಿದೆ. ಅಂತಹ ಜೀವನಕ್ಕೆ ಮಾರ್ಗ ದರ್ಶನ ನೀಡುವ ಕೆಲಸವನ್ನು ಯಕ್ಷಗಾನ ಕಲೆ ಮಾಡುತ್ತಿದೆ. ಆದರೆ ಇತರ ಕಲೆಗಳು ಕೇವಲ ಮನರಂಜನೆಗೆ ಸೀಮಿತವಾಗಿದೆ ಎಂದು ಅವರು ತಿಳಿಸಿದರು.
ದೇವಳದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಾವರ ಜಿ.ಎಂ.ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನ ಅಧ್ಯಕ್ಷ ಪ್ರಕಾಶ್ ಚಂದ್ರಶೆಟ್ಟಿ, ಉದ್ಯಮಿಗಳಾದ ಪಿ.ನಟರಾಜ್ ಹೆಗಡೆ, ಪ್ರವೀಣ್ ಶೆಟ್ಟಿ ಪೂನಾ, ಬ್ರಹ್ಮಾವರ ವ್ಯವಸಾಯ ಸಂಘದ ನಿರ್ದೇಶಕ ಬಿರ್ತಿ ರಾಜೇಶ್ ಶೆಟ್ಟಿ, ಅನಿವಾಸಿ ಭಾರತೀಯ ಬಾಲಕೃಷ್ಣ ರಾವ್ ಮುಖ್ಯ ಅತಿಥಿಗಳಾಗಿದ್ದರು.
ಶಿಬಿರದ ನಿರ್ದೇಶಕ ಹುಬ್ಬಳ್ಳಿಯ ಮೈ ಲೈಫ್ ಸಂಸ್ಥೆಯ ಸಂಸ್ಥಾಪಕ ಪ್ರವೀಣ್ ಗುಡಿ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಸಂಸ್ಥೆಯ ಅಧ್ಯಕ್ಷ ಕೆ.ಗಣೇಶ್ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕವಾಗಿ ಮಾತನಾ ಡಿದರು. ಉಪಾಧ್ಯಕ್ಷ ಗಂಗಾಧರ ರಾವ್ ವಂದಿಸಿದರು. ಜತೆ ಕಾರ್ಯದರ್ಶಿ ಪ್ರೊ.ನಾರಾಯಣ ಎಂ.ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ ಸುಮಾರು 300 ವಿದ್ಯಾರ್ಥಿಗಳು ಭಾಗವಹಿಸಿದ್ದರು.







