ಹಳೆ ಬಟ್ಟೆಗಳಿಗೆ ಮರುಜೀವ ನೀಡುವ ಯೋಜನೆ

ಉಡುಪಿ, ಫೆ.10: ಜಿಲ್ಲಾ ನಾಗರಿಕ ಸಮಿತಿಯ ವತಿಯಿಂದ ಹಳೆ ಬಟ್ಟೆಗಳಿಗೆ ಮರುಜೀವ ನೀಡುವ ಯೋಜನೆಯ ಮೂರನೇ ಹಂತದ ಕಾರ್ಯಕ್ರಮವು ಬೀಡಿನಗುಡ್ಡೆ ವಲಸೆ ಕಾರ್ಮಿಕರ ಬಡಾವಣೆಗಳಲ್ಲಿ ರವಿವಾರ ನಡೆಯಿತು.
ಬಟ್ಟೆ ಅಂಗಡಿಗಳಲ್ಲಿ ಹಳೆ ದಾಸ್ತಾನುಗಳಾಗಿ ಉಳಿದ ಬಟ್ಟೆಗಳನ್ನು ಅಂಗಡಿ ಮಾಲಿಕರು ಸಮಿತಿಯವರ ಯೋಜನೆಗೆ ದಾನವಾಗಿ ನೀಡಿದ್ದರು. ಉತ್ತಮ ಗುಣಮಟ್ಟದ ಹಳೆಯ ಬಟ್ಟೆಗಳನ್ನು ನೀಡುವಂತೆ ಸಮಿತಿ ಸಾಮಾಜಿಕ ಜಾಲ ತಾಣದಲ್ಲಿ ಪ್ರಕಟಣೆಯನ್ನು ನೀಡಿತ್ತು.
ಇದಕ್ಕೆ ಸ್ಪಂದಿಸಿದ ನಗರದ ನಿವಾಸಿಗಳು ಬಟ್ಟೆಗಳ ಶುಚಿಗೊಳಿಸಿ ಸಮಿತಿಯ ಕಛೇರಿಗೆ ತಂದು ಒಪ್ಪಿಸಿದ್ದರು. ಹೀಗೆ ಸಾರ್ವಜನಿಕರಿಂದ ಸಂಗ್ರಹವಾದ ಉತ್ತಮ ಗುಣಮಟ್ಟದ ಬಟ್ಟೆಗಳನ್ನು ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾ ನಂದ ಒಳಕಾಡು, ಸದಸ್ಯರಾದ ತಾರಾನಾಥ್ ಮೇಸ್ತ ಶಿರೂರು, ರಾಜು ಪೂಜಾರಿ ಬೀಡಿನಗುಡ್ಡೆ ನಗರದ ಹೊರ ವಲಯದಲ್ಲಿರುವ ವಲಸೆ ಕಾರ್ಮಿಕರ ಬಡಾವಣೆ, ಕೊರಗರ ಬಡಾವಣೆಗಳಲ್ಲಿ ಪುರುಷರ, ಮಹಿಳೆಯರ, ಮಕ್ಕಳ ಬಟ್ಟೆಗಳನ್ನು ವಿತರಿಸಿದರು. ನೂರಾರು ಕಾರ್ಮಿಕರು ತಮಗೆ ಬೇಕಾದ ಬಟ್ಟೆಗಳನ್ನು ಆಯ್ದು ಕೊಂಡರು.





