ಮಾಧ್ಯಮಗಳಿಂದಾಗಿ ರಾಜಕಾರಣಿಗಳಿಗೆ ಕಳ್ಳರು ಎಂಬ ಪಟ್ಟ ಕಟ್ಟುತ್ತಿದ್ದಾರೆ: ಸಚಿವ ಡಿ.ಕೆ.ಶಿವಕುಮಾರ್
ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರದಾನ, ಪುಸ್ತಕಗಳ ಲೋಕಾರ್ಪಣೆ ಸಮಾರಂಭ

ಬೆಂಗಳೂರು, ಫೆ.11: ಮಾಧ್ಯಮಗಳು ಸತ್ಯಾಂಶವನ್ನು ತೋರಿಸುವುದನ್ನು ಬಿಟ್ಟು ನ್ಯಾಯಾಧೀಶರ ಸ್ಥಾನದಲ್ಲಿ ಕೂತು ತೀರ್ಪು ನೀಡುತ್ತಿದೆ. ಅದರಿಂದಾಗುವ ನಷ್ಟಕ್ಕೆ ಜವಾಬ್ದಾರರು ಯಾರು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
ನಗರದ ಅಂಬೇಡ್ಕರ್ ಭವನದಲ್ಲಿ ಮಾಧ್ಯಮ ಅಕಾಡೆಮಿಯಿಂದ ಆಯೋಜಿಸಿದ್ದ ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕಗಳ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಮಾಜಕ್ಕೆ ಒಳ್ಳೆಯದನ್ನು, ಕೆಟ್ಟದನ್ನು ತೋರಿಸುವುದು ಮಾಧ್ಯಮ. ಆದರೆ, ಇತ್ತೀಚಿನ ದಿನಗಳಲ್ಲಿ ಒಳ್ಳೆಯ ಅಂಶಗಳು ತೀವ್ರ ಕಡಿಮೆಯಾಗುತ್ತಿವೆ ಎಂದ ಅವರು, ಟೀಕೆ ಮಾಡುವುದನ್ನು ವಿರೋಧ ಮಾಡುವುದಿಲ್ಲ. ಆದರೆ, ಇಲ್ಲದ್ದನ್ನು ಪದೇ ಪದೇ ತೋರಿಸುವ ಮೂಲಕ ಜನರಲ್ಲಿ ತಪ್ಪು ಭಾವನೆ ಮೂಡಿಸುವ ಪ್ರಯತ್ನವಾಗುತ್ತಿದೆ. ನಮ್ಮ ಮನೆಯ ಮೇಲೆ ಐಟಿ ದಾಳಿಯಾದ ಸಂದರ್ಭದಲ್ಲಿ ತೋರಿಸಿದ್ದನ್ನು ನೋಡಿದರೆ ಎಲ್ಲರೂ ತೀರ್ಪುಗಾರರಾಗಿದ್ದರು ಎಂದು ಬೇಸರ ವ್ಯಕ್ತಪಡಿಸಿದರು.
ಒಬ್ಬ ನಾಯಕ ಪಂಚಾಯತ್ ಮಟ್ಟದಿಂದ ಶಾಸಕ, ಸಚಿವ, ಮುಖ್ಯಮಂತ್ರಿ ಸ್ಥಾನದವರೆಗೂ ಬೆಳೆಯಲು ಅಪಾರವಾದ ಕಷ್ಟಪಟ್ಟಿರುತ್ತಾರೆ. ಸತ್ಯಾಂಶವಿಲ್ಲದೆ ಪದೇ ಪದೇ ಮಾಧ್ಯಮಗಳು ವ್ಯಕ್ತಿಯನ್ನು ಹತ್ಯೆ ಮಾಡಿದರೆ, ಮತ್ತೊಮ್ಮೆ ಅಂತಹ ನಾಯಕರನ್ನು ತಯಾರು ಮಾಡಲು ಕಷ್ಟ. ಮಾಧ್ಯಮಗಳು ನೀಡುವ ವರದಿಯನ್ನು ಅರಗಿಸಿಕೊಳ್ಳಬಲ್ಲ ವ್ಯಕ್ತಿಯಾದರೆ ಬದುಕುತ್ತಾನೆ. ಅದು ಸಾಧ್ಯವಾಗದಿದ್ದಲ್ಲಿ ಅಂತಹ ನಾಯಕ ಸಾಯುತ್ತಾನೆ. ಇದಕ್ಕೆ ಹೊಣೆ ಯಾರಾಗುತ್ತಾರೆ ಎಂದು ಅವರು ಪ್ರಶ್ನಿಸಿದರು.
ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ವಿಧಾನಸೌಧದೊಳಗೆ ಶಾಸಕರನ್ನು ಖರೀದಿ ಮಾಡಲಾಗುತ್ತಿದೆ. ಇದು ಮಾಧ್ಯಮ ಕ್ಷೇತ್ರಕ್ಕೂ ಲಗ್ಗೆಯಿಟ್ಟಿದ್ದು, ದೊಡ್ಡ ಕಂಪನಿಗಳು, ಬಂಡವಾಳಶಾಹಿಗಳು ಮಾಧ್ಯಮ ರಂಗವನ್ನು ನಡೆಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಾಧ್ಯಮ ಕ್ಷೇತ್ರ ಸಮಾಜ ಸೇವೆಯ ಬದಲಿಗೆ ವಾಣಿಜ್ಯವಾಗಿದೆ. ತಿಂಗಳ ಕೊನೆಯಲ್ಲಿ ಮಾಧ್ಯಮದ ಮುಖ್ಯಸ್ಥರು ಬ್ಯಾಲೆನ್ಸ್ ಶೀಟ್ ನೋಡುವ ಸ್ಥಿತಿಗೆ ಬಂದು ತಲುಪಿದೆ ಎಂದು ವಿಷಾದಿಸಿದರು.
ಮಾಧ್ಯಮ ಕ್ಷೇತ್ರಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡ ಅನೇಕರನ್ನು ನೋಡಿದ್ದೇನೆ. ಆದರೆ, ಇಂದು ಇಡೀ ಕ್ಷೇತ್ರವೇ ಬದಲಾಗಿದೆ. ತಿನ್ನಲು, ಮಲಗಲು ಸರಿಯಾದ ವ್ಯವಸ್ಥೆಯಿಲ್ಲದವರೇ ಅನೇಕರಿದ್ದಾರೆ. ಅದರ ನಡುವೆಯೂ ಕೆಲವರು ಅತಿ ವೇಗವಾಗಿ ಬೆಳೆಯುತ್ತಿರುವುದನ್ನು ಗಮನಿಸಿದ್ದೇನೆ. ಇಂದಿಗೂ ಮಾಧ್ಯಮದಲ್ಲಿ ಕೆಲಸ ಮಾಡುವ ಅನೇಕರು ಬಸ್‌ಗಳಲ್ಲಿ ಓಡಾಡುವವರಿದ್ದಾರೆ ಎಂದು ಅವರು ನೆನಪಿಸಿಕೊಂಡರು.
ಸಮಾರಂಭದಲ್ಲಿ ತಳಸಮುದಾಯದ ಬಗೆಗಿನ ಬರಹಗಳ ಅಂಕಣಕಾರರಿಗೆ ನೀಡುವ ಡಾ.ಬಿ.ಆರ್.ಅಂಬೇಡ್ಕರ್ ಮೂಕನಾಯಕ ಪ್ರಶಸ್ತಿಯನ್ನು ಹಿರಿಯ ಅಂಕಣಕಾರ ಡಾ.ಸಿ.ಎಸ್.ದ್ವಾರಕಾನಾಥ್‌ಗೆ, ಅತ್ಯುತ್ತಮ ಜಿಲ್ಲಾ ಪತ್ರಿಕಾ ಪ್ರಶಸ್ತಿಯಾದ ಆಂದೋಲನ ಪ್ರಶಸ್ತಿಯನ್ನು ಕೋಲಾರ ವಾಣಿಗೆ, ಅತ್ಯುತ್ತಮ ಸಿನಿಮಾ ಪತ್ರಕರ್ತರಿಗೆ ನೀಡುವ ಅರಿಗಿಣಿ ಪ್ರಶಸ್ತಿಯನ್ನು ದೇಶಾದ್ರಿ ಹೊಸ್ಮನೆಗೆ, ಸಾಮಾಜಿಕ ಸಮಸ್ಯೆಗಳ ಲೇಖನಕ್ಕೆ ನೀಡುವ ಅಭಿಮಾನಿ ಪ್ರಶಸ್ತಿಯನ್ನು ಪರಮೇಶ್ವರ ಭಟ್ ಅವರಿಗೆ ನೀಡಲಾಯಿತು.
ಇದೇ ಸಂದರ್ಭದಲ್ಲಿ ಧರ್ಮಾವರಪು ಬಾಲಾಜಿಗೆ ಜೀವಮಾನದ ಸಾಧನೆಗೆ ವಿಶೇಷ ಪ್ರಶಸ್ತಿ ಸೇರಿದಂತೆ 50 ಜನರಿಗೆ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ಎಚ್.ಪಿ.ದಿನೇಶ್, ವಾರ್ತಾ ಇಲಾಖೆಯ ನಿರ್ದೇಶಕ ಎಂ.ರವಿಕುಮಾರ್, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್.ಕಾಂತರಾಜ್, ಅಕಾಡೆಮಿ ಅಧ್ಯಕ್ಷ ಸಿದ್ದರಾಜು ಉಪಸ್ಥಿತರಿದ್ದರು.
ಚಿತ್ರರಂಗದಲ್ಲಿ ಪರದೆಯ ಮೇಲೆ ಬಣ್ಣ ಹಚ್ಚಿಕೊಂಡು ನಟಿಸುತ್ತಾರೆ. ಆದರೆ, ನಾವಿಂದು ಬಣ್ಣವಿಲ್ಲದೆ ನಟನೆ ಮಾಡುತ್ತಿದ್ದೇವೆ. ಹಿಂದಿನ ದಿನಗಳಲ್ಲಿ ರಾಜಕಾರಣಿಗಳನ್ನು ಕಂಡರೆ ಅಪಾರವಾದ ಗೌರವ ಕೊಡುತ್ತಿದ್ದರು. ಆದರೆ, ಇಂದು ಮಾಧ್ಯಮಗಳಲ್ಲಿ ಬಿತ್ತರವಾಗುವ ವರದಿಗಳಿಂದಾಗಿ ರಾಜಕಾರಣಿಯನ್ನು ಕಂಡರೆ ಕಳ್ಳರು ಎಂಬ ಪಟ್ಟ ಕಟ್ಟುತ್ತಿದ್ದಾರೆ.
-ಡಿ.ಕೆ.ಶಿವಕುಮಾರ್, ಜಲಸಂಪನ್ಮೂಲ ಸಚಿವ
ಮಾಧ್ಯಮ ಕ್ಷೇತ್ರಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡ ಅನೇಕರನ್ನು ನೋಡಿದ್ದೇನೆ. ತಿನ್ನಲು, ಮಲಗಲು ಸರಿಯಾದ ವ್ಯವಸ್ಥೆಯಿಲ್ಲದ; ಇಂದಿಗೂ ಬಸ್‌ಗಳಲ್ಲಿ ಓಡಾಡುವವ ಅನೇಕರಿದ್ದಾರೆ. ಅದರ ನಡುವೆಯೂ ಕೆಲವರು ಅತಿ ವೇಗವಾಗಿ ಬೆಳೆಯುತ್ತಿರುವುದನ್ನೂ ಗಮನಿಸಿದ್ದೇನೆ. ಇಂದು ಇಡೀ ಕ್ಷೇತ್ರವೇ ಬದಲಾಗಿದೆ.
-ಡಾ.ಜಿ.ಪರಮೇಶ್ವರ್, ಉಪಮುಖ್ಯಮಂತ್ರಿ







