ಇರಾ: ಪರಪ್ಪು ಸೈಟ್‍ನಲ್ಲಿ ಸಮಸ್ತ ಮಹಾ ಸಮ್ಮೇಳನ

ಕೊಣಾಜೆ, ಫೆ. 11: ಸಮಾಜದಲ್ಲಿ ಧಾರ್ಮಿಕ ಮತ್ತು ಸಾಮಾಜಿಕವಾಗಿ ಜಾಗೃತಿ ಮೂಡಿಸುವ ಜವಾಬ್ದಾರಿ ಸಮಸ್ತ ಕಾರ್ಯಕರ್ತರ ಮೇಲಿದ್ದು, ಇತರರನ್ನು ಸೋಲಿಸುವ, ದ್ವೇಷಿಸುವ ಕೆಲಸ ಸಮಸ್ತ ಕಾರ್ಯಕರ್ತರಿಂದ ನಡೆಯಬಾರದು ಎಂದು ಬೆಳ್ತಂಗಡಿ ದಾರುಸ್ಸಲಾಂ ಎಜ್ಯುಕೇಶನ್ ಸೆಂಟರ್ ಅಧ್ಯಕ್ಷ ಸಯ್ಯಿದ್ ಝೈನುಲ್ ಅಬಿದೀನ್ ಜಿಫ್ರಿ ತಂಙಳ್ ಪೊಸೋಟ್ ಕಿವಿಮಾತು ಹೇಳಿದರು.
ಎಸ್ಕೆಎಸ್ಸೆಸ್ಸೆಫ್ ಪರಪ್ಪು ಸೈಟ್ ಶಾಖೆಯ ವತಿಯಿಂದ ರವಿವಾರ ಪರಪ್ಪು ಸೈಟ್‍ನಲ್ಲಿರುವ ಪಂಚಾಯಿತಿ ಮೈದಾನದಲ್ಲಿ ನಡೆದ ಸಮಸ್ತ ಮಹಾಸಮ್ಮೇಳನ, ಶೈಖುನಾ ಮಿತ್ತಬೈಲ್ ಜಬ್ಬಾರ್ ಉಸ್ತಾದ್ ಹಾಗೂ ಅಗಲಿದ ಸಮಸ್ತ ನೇತಾರರ ಅನುಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದು ಕೆಲವು ಧರ್ಮಗುರುಗಳು ಸ್ವಾರ್ಥಕ್ಕಾಗಿ ಜನರನ್ನು ಹೆದರಿಸಿ ಹೆಸರು ಗಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಯಾರನ್ನೋ ಹೆದರಿಸಿ ಅಥವಾ ಯಾರೂ ದೊಡ್ಡ ಫ್ಲೆಕ್ಸ್ ಹಾಕಿದ ಮಾತ್ರಕ್ಕೆ ಮಹಾತ್ಮನಾಗಲಾರ. ಸಮಸ್ತದ ಆದರ್ಶ ಪವಿತ್ರವಾಗಿದೆ, ಈ ಸಂಘಟನೆ ಮಹಾತ್ಮರು ಮುನ್ನಡೆಸುತ್ತಿರುವುದರಿಂದ ಯಾವುದೇ ರೀತಿಯ ಕೊರತೆ ಕಂಡು ಹಿಡಿಯಲು ಸಾಧ್ಯವಿಲ್ಲ ಎಂದು ಹೇಳಿದರು.
ಜಿಲ್ಲಾ ಸಮಸ್ತ ಮುದರ್ರಿಸ್ ಉಪಾಧ್ಯಕ್ಷ ಹಾರೂನ್ ಅಹ್ಸನಿ ಕೋಟೆಕಾರ್ ಮಾತನಾಡಿ, ದೊಡ್ಡ ಕಟ್ಟಡ ಕಟ್ಟಿದ ಮಾತ್ರಕ್ಕೆ ಮಹಾನ್ ಗುರು ಆಗಲು ಸಾಧ್ಯವಿಲ್ಲ. ನಯ-ವಿನಯ, ಇಹಲೋಕದ ಮೇಲೆ ಜಿಗುಪ್ಸೆಯ ಜೀವನ ನಡೆಸಿದವರೇ ಮಹಾನ್ ವ್ಯಕ್ತಿ ಎನಿಸುತ್ತಾರೆ. ಇಂತಹ ಧರ್ಮಗುರುಗಳನ್ನು ಸಮಸ್ತದಲ್ಲಿ ಮಾತ್ರ ಕಾಣಲು ಸಾಧ್ಯ ಎಂದರು.
ಶೈಖುನಾ ಮುಹಮ್ಮದ್ ಮುಸ್ಲಿಯಾರ್ ಪಾತೂರ್ ಧ್ವಜರೋಹಣಗೈದರು. ಸಯ್ಯಿದ್ ಇಬ್ರಾಹಿಂ ಬಾತಿಷ್ ತಂಙಳ್ ಅಲ್ ಅಝ್ಹರಿ ಅನೆಕಲ್ಲು ಮಜ್ಲಿಸುನ್ನೂರು ನೇತೃತ್ವ ನೀಡಿದರು. ಸಮಸ್ತ ಕರ್ನಾಟಕ ಮುಶಾವರ ಪ್ರಾಂಶುಪಾಲ ಶೈಖುನಾ ಅಲ್-ಹಾಜ್ ಬಿ.ಕೆ.ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಉದ್ಘಾಟಿಸಿದರು. ಪರಪ್ಪು ಸೈಟ್ ಎಸ್ಕೆಸ್ಸೆಸ್ಸೆಫ್ ಅಧ್ಯಕ್ಷ ಮುಹಮ್ಮದ್ ರಫೀಕ್ ಪರಪ್ಪು ಅಧ್ಯಕ್ಷತೆ ವಹಿಸಿದ್ದರು. ಉಸ್ತಾದ್ ವಲಿಯುದ್ದೀನ್ ಫೈಝಿ ವಯಕ್ಕಾಡ್ ಮುಖ್ಯ ಭಾಷಣ ಮಾಡಿದರು.
ಅನೀಸ್ ಕೌಸರಿ ವಿರಮಂಗೀಲ, ಅಬ್ದುಲ್ಲಾ ಮುಸ್ಲಿಯಾರ್ ಪರಪ್ಪು, ರಿಯಾಝ್ ರಹ್ಮಾನಿ ಕಿನ್ಯ, ಝೈನ್ ಸಖಾಫಿ ಉಳ್ಳಾಲ, ಟಿ.ಇಬ್ರಾಹಿಂ ಸಂಪಿಲ, ಇಬ್ರಾಹಿಂ ದಾರಿಮಿ ಪಾತೂರು, ಮಾಹಿನ್ ದಾರಿಮಿ ಪಾತೂರು, ಹನೀಫ್ ಮುಸ್ಲಿಯಾರ್ ಬೋಳಂತೂರು ಮುಖ್ಯ ಅತಿಥಿಗಳಾಗಿದ್ದರು. ಎಸ್ಕೆಎಸ್ಸೆಸ್ಸೆಫ್ ಪದಾಧಿಕಾರಿಗಳಾದ ಇಕ್ಬಾಲ್ ಸೈಟ್, ರಝಾಕ್ ಸೈಟ್, ಇಬ್ರಾಹಿಂ ಸೈಟ್, ಇಸ್ಮಾಯಿಲ್ ಸೈಟ್, ಇಲ್ಯಾಸ್ ಪರಪ್ಪು, ನಿಝಾಮ್ ಪರಪ್ಪು, ಉಮ್ಮರ್ ಇರಾ ಮೊದಲಾದವರು ಉಪಸ್ಥಿತರಿದ್ದರು.
ಮುಹಮ್ಮದ್ ಅಲಿ ಫೈಝಿ ಪರಪ್ಪು ಸ್ವಾಗತಿಸಿದರು. ಇರ್ಷಾದ್ ಫೈಝಿ ಪಾಣತ್ತೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಇರ್ಫಾನ್ ಮೌಲವಿ ಕಲಾಯಿ ಕಾರ್ಯಕ್ರಮ ನಿರೂಪಿಸಿದರು.








