ಉತ್ತರಪ್ರದೇಶದಲ್ಲಿ ಕಳೆದ ವಾರ 100 ಗೋವುಗಳ ಸಾವು

ಮುಝಪ್ಫರ್‌ನಗರ್, ಫೆ. 11: ಕಳೆದ ವಾರ ಎರಡು ದಿನಗಳ ಕಾಲಾವಧಿಯಲ್ಲಿ ಉತ್ತರಪ್ರದೇಶದ ಮುಝಪ್ಫರ್‌ನಗರ ಜಿಲ್ಲೆಯಲ್ಲಿ 100ಕ್ಕೂ ಅಧಿಕ ಗೋವುಗಳು ಮೃತಪಟ್ಟಿವೆ. ಈ ಬಗ್ಗೆ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. ಗೋವುಗಳು ವಿಷಯುಕ್ತ ಹುಲ್ಲು ಅಥವಾ ಮಾಲಿನ್ಯದಿಂದ ಕೂಡಿದ ನೀರು ಸೇವಿಸಿರುವ ಸಾಧ್ಯತೆ ಇದೆ ಎಂದು ಉಪ ವಿಭಾಗೀಯ ದಂಡಾಧಿಕಾರಿ ವಿಜಯ್ ಕುಮಾರ್ ಹೇಳಿದ್ದಾರೆ.
ಗೋವುಗಳ ಸಾವು ಸಂಭವಿಸಿದ ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಹಾಗೂ ಪಶು ಚಿಕಿತ್ಸಾ ತಜ್ಞರನ್ನು ಒಳಗೊಂಡ ತಂಡ ಆಗಮಿಸಿದೆ ಎಂದು ಕುಮಾರ್ ತಿಳಿಸಿದ್ದಾರೆ. ಕಳೆದ ವಾರ ಶಾಮಿಲಿ ಜಿಲ್ಲೆಯ ಸಮೀಪದ ತಾತ್ಕಾಲಿಕ ಗೋಶಾಲೆಯಲ್ಲಿ ಕನಿಷ್ಠ 9 ಬೀಡಾಡಿ ಗೋವುಗಳು ಚಳಿಯಿಂದ ಮೃತಪಟ್ಟಿವೆ ಎಂದು ವರದಿಯಾಗಿದೆ. 2019-10ರ ರಾಜ್ಯ ಬಜೆಟ್‌ನಲ್ಲಿ ಆದಿತ್ಯನಾಥ್ ಸರಕಾರ ಗೋಶಾಲೆ ನಿರ್ಮಾಣ ಮಾಡಲು 447 ಕೋಟಿ ರೂಪಾಯಿ ಮಂಜೂರು ಮಾಡಿದ ವಾರದಲ್ಲೇ ಗೋವುಗಳ ಸಾವು ಸಂಭವಿಸಿದೆ.
ಈ ಬಜೆಟ್ ಗ್ರಾಮೀಣ ಪ್ರದೇಶದಲ್ಲಿ ಗೋಶಾಲೆಯ ನಿರ್ಮಾಣ ಹಾಗೂ ನಿರ್ವಹಣೆಗೆ 247 ಕೋಟಿ ರೂಪಾಯಿ ಹಾಗೂ ನಗರ ಪ್ರದೇಶದಲ್ಲಿ ಕನ್ಹಾ ಗೋಶಾಲೆ, ನಿರ್ಗತಿಕ ಜಾನುವಾರುಗಳಿಗೆ ಗೋಶಾಲೆಗಳನ್ನು ಆರಂಭಿಸಲು 200 ಕೋಟಿ ರೂಪಾಯಿ ಒಳಗೊಂಡಿತ್ತು. ಬೀಡಾಡಿ ದನಗಳಿಗೆ ತಾತ್ಕಾಲಿಕ ಗೋಶಾಲೆ ಸೌಲಭ್ಯ ಆರಂಭಿಸುವ ಯೋಜನೆಯನ್ನು ಜನವರಿ 1ರಂದು ರಾಜ್ಯ ಸಂಪುಟ ಅನುಮೋದನೆ ನೀಡಿತ್ತು.
ಈ ಸೌಲಭ್ಯವನ್ನು ನಿರ್ವಹಿಸಲು ‘ಗೋ ಕಲ್ಯಾಣ ಸೆಸ್’ ಅನ್ನು ಜಾರಿಗೊಳಿಸಿತ್ತು.







