‘ಮಮತಾ ಬ್ಯಾನರ್ಜಿಗೆ ಬೆಂಬಲ’ದ ಬಗ್ಗೆ ಮಂಗಳೂರಿನಲ್ಲಿ ಮೋದಿ ಸಹೋದರ ಪ್ರಹ್ಲಾದ್ ಮೋದಿ ಹೇಳಿದ್ದೇನು?

ಮಂಗಳೂರು, ಫೆ. 12: ನಾನು ರಾಜಕೀಯಕ್ಕೆ ಬರುವ ಬಗ್ಗೆ ಯೋಚನೆಯೇ ಮಾಡಿಲ್ಲ. ನಮ್ಮ ಪರಿವಾರದಿಂದ ನರೇಂದ್ರ ಭಾಯ್ ಒಬ್ಬರೇ ಸಾಕು. ಅವರಿಗೇ ಕೆಲವರು ಹೆದರುತ್ತಾರೆ. ಹೀಗಿರುವಾಗ ನಾನು ಯಾಕೆ ? ಎಂದು ಪ್ರಧಾನಿ ನರೇಂದ್ರ ಮೋದಿ ಸಹೋದರ ಪ್ರಹ್ಲಾದ್ ಮೋದಿ ಹೇಳಿದ್ದಾರೆ.
ದೇವಸ್ಥಾನಗಳ ಭೇಟಿಗಾಗಿ ಇಂದು ಮಂಗಳೂರಿಗೆ ಆಗಮಿಸಿದ್ದ ವೇಳೆ ಅವರು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದು ಹೀಗೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ನಾನು ಬೆಂಬಲಿಸಿಲ್ಲ. ಬೆಂಬಲಿಸುವುದೂ ಇಲ್ಲ. ಯಾವುದೋ ಮಾಧ್ಯಮದಲ್ಲಿ ನನ್ನ ಹೇಳಿಕೆ ತಿರುಚಲಾಗಿದೆ ಎಂದು ಹೇಳಿದ ಅವರು, ನಾನು ರೇಶನ್ ಅಂಗಡಿ ಡೀಲರುಗಳ ಒಕ್ಕೂಟದ ರಾಷ್ಟ್ರೀಯ ಉಪಾಧ್ಯಕ್ಷ, ಆ ನೆಲೆಯಲ್ಲಿ ಕೆಲವೊಂದು ವಿಚಾರ ಮಾತನಾಡುತ್ತೇನೆ, ಕೇಂದ್ರ ಸರ್ಕಾರದ ವಿರುದ್ಧವೂ ಮಾತನಾಡಿದ್ದೇನೆಯೇ ಹೊರತು, ಎನ್‌ಡಿಎ ಸರ್ಕಾರದ ವಿರೋಧಿಯಲ್ಲ ಎಂದರು.
ಪ್ರಿಯಾಂಕ ಗಾಂಧಿ ಸಕ್ರಿಯ ರಾಜಕಾರಣಕ್ಕಿಳಿದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರಿಯಾಂಕ ಬರಲಿ, ಪ್ರಿಯದರ್ಶಿನಿಯೇ ಬರಲಿ, 2019ರಲ್ಲೂ ನರೇಂದ್ರ ಮೋದಿ ಪ್ರಧಾನಿಯಾಗಬೇಕು ಎಂದು ಜನರ ಮನಸ್ಸಿನಲ್ಲಿದ್ದರೆ ಅದನ್ನು ಯಾರೂ ತಪ್ಪಿಸಲಾಗುವುದಿಲ್ಲ ಎಂದರು.
ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ಮೋದಿ ಮಾಡಿರುವ ಕಾರ್ಯಗಳನ್ನು ಜನರು ಸ್ವೀಕರಿಸಿದ್ದಾರೆ. ಕಾಂಗ್ರೆಸಿಗರು ಚಿಕ್ಕ ವಿಷಯಗಳನ್ನು ದೊಡ್ಡದು ಮಾಡುತ್ತಿದ್ದಾರೆ. ಈ ಬಾರಿಯೂ ಎನ್‌ಡಿಎ 300ಕ್ಕೂ ಹೆಚ್ಚು ಸೀಟುಗಳಿಸಲಿದೆ ಎಂದು ಅವರು ಹೇಳಿದರು.
ಘಟ್ ಬಂಧನ್ ನಿಂದ ಏನೂ ಬದಲಾಗುವುದಿಲ್ಲ. ಹಿಂದೆಯೂ ಘಟ್‌ಬಂಧನ್‌ಗಳು ನಡೆದಿವೆ. ವಾಜಪೇಯಿಯವರಿದ್ದಾಗ ಎನ್‌ಡಿಎ ರಚನೆಯಾಗಿದೆ, ಈಗಲೂ ಇದೆ, ಸದೃಢವಾಗಿದೆ ಎಂದು ಘಟ್ ಬಂಧನ್ ಕುರಿತ ಪ್ರಶ್ನೆಗೆ ಅವರು ಉತ್ತರಿಸಿದರು.







