ಅಲಿಗಢ ಮುಸ್ಲಿಂ ವಿವಿಗೆ ಅಲ್ಪಸಂಖ್ಯಾತ ಸ್ಥಾನಮಾನ: ನಿರ್ಧಾರದ ಹೊಣೆ ಸುಪ್ರೀಂ ವಿಶಾಲ ಪೀಠಕ್ಕೆ
ಹೊಸದಿಲ್ಲಿ,ಫೆ.12: ಅಲಿಗಢ ಮುಸ್ಲಿಂ ವಿವಿ(ಅಮು)ಗೆ ಅಲ್ಪಸಂಖ್ಯಾತ ಸ್ಥಾನಮಾನದ ಕುರಿತು ನಿರ್ಧರಿಸುವ ಹೊಣೆಯನ್ನು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಏಳು ನ್ಯಾಯಾಧೀಶರ ವಿಶಾಲ ಪೀಠಕ್ಕೊಪ್ಪಿಸಿತು.
ಮು.ನ್ಯಾ.ರಂಜನ ಗೊಗೊಯಿ ನೇತೃತ್ವದ ಮೂವರು ನ್ಯಾಯಾಧೀಶರ ಪೀಠವು ಶಿಕ್ಷಣ ಸಂಸ್ಥೆಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಲು ಮಾನದಂಡಗಳ ವ್ಯಾಖ್ಯಾನಕ್ಕಾಗಿ ವಿಷಯವನ್ನು ವಿಶಾಲ ಪೀಠಕ್ಕೆ ಹಸ್ತಾಂತರಿಸಿತು.
ಅಮು ಅಲ್ಪಸಂಖ್ಯಾತ ಸಂಸ್ಥೆಯಲ್ಲ ಎನ್ನುವುದನ್ನು ಎತ್ತಿ ಹಿಡಿದಿದ್ದ ಅಲಹಾಬಾದ್ ಉಚ್ಚ ನ್ಯಾಯಾಲಯದ 2006ರ ತೀರ್ಪನ್ನು ಪ್ರಶ್ನಿಸಿ ಆಗಿನ ಯುಪಿಎ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಿತ್ತು. ಉಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ವಿವಿಯೂ ಪ್ರತ್ಯೇಕ ಮೇಲ್ಮನವಿಯನ್ನು ಸಲ್ಲಿಸಿತ್ತು. ಯುಪಿಎ ಸರಕಾರವು ಸಲ್ಲಿಸಿದ್ದ ಮೇಲ್ಮನವಿಯನ್ನು ತಾನು ಹಿಂದೆಗೆದುಕೊಳ್ಳುವುದಾಗಿ ಕೇಂದ್ರದ ಬಿಜೆಪಿ ನೇತೃತ್ವದ ಸರಕಾರವು 2016ರಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿತ್ತು.
1968ರಲ್ಲಿ ಅಝೀಝ್ ಬಾಷಾ ಪ್ರಕರಣದಲ್ಲಿ ಐವರು ನ್ಯಾಯಾಧೀಶರ ಪೀಠವು ಅಮು ಕೇಂದ್ರೀಯ ವಿವಿಯಾಗಿದೆ, ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯಲ್ಲ ಎನ್ನುವುದನ್ನು ಎತ್ತಿ ಹಿಡಿದಿತ್ತು ಎಂದೂ ಅದು ಹೇಳಿತ್ತು.
1968ರ ತೀರ್ಪಿನ ಬಳಿಕ ಅಮು(ತಿದ್ದುಪಡಿ) ಕಾಯ್ದೆಯು ಜಾರಿಗೆ ಬಂದಿತ್ತು. ವಿವಿಗೆ ಅಲ್ಪಸಂಖ್ಯಾತ ಸ್ಥಾನಮಾನವನ್ನು ನೀಡಿದ್ದ ಕಾಯ್ದೆಯಲ್ಲಿಯ ಪರಿಚ್ಛೇದವನ್ನು ಜನವರಿ,2016ರಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯವು ರದ್ದುಗೊಳಿಸಿತ್ತು.