ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಅವ್ಯವಹಾರ ಆರೋಪ: ಸದನ ಸಮಿತಿ ರಚನೆಗೆ ಆಗ್ರಹಿಸಿ ಪರಿಷತ್ನಲ್ಲಿ ಬಿಜೆಪಿ ಧರಣಿ

ಸಾಂದರ್ಭಿಕ ಚಿತ್ರ
ಬೆಂಗಳೂರು, ಫೆ.12: ಸರಕಾರದ ಮಹತ್ವಾಕಾಂಕ್ಷಿ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಕೋಟ್ಯಂತರ ರೂ.ಭ್ರಷ್ಟಾಚಾರ ನಡೆದಿದ್ದು, ಘಟಕಗಳು ಸೂಕ್ತ ನಿರ್ವಹಣೆ ಇಲ್ಲದೆ, ಅಧೋಗತಿಗೆ ತಲುಪಿವೆ. ಹೀಗಾಗಿ, ಅವ್ಯವಹಾರದ ಕುರಿತು ತನಿಖೆ ನಡೆಸಲು ಸದನ ಸಮಿತಿ ರಚಿಸಬೇಕೆಂದು ಪ್ರತಿಪಕ್ಷದ ಸದಸ್ಯರು ಕಲಾಪದ ಬಾವಿಗೆ ಇಳಿದು ಧರಣಿ ನಡೆಸಿದ್ದರಿಂದ ಸಭಾಪತಿಗಳು ಪರಿಷತ್ ಕಲಾಪವನ್ನು ಬುಧವಾರಕ್ಕೆ ಮುಂದೂಡಿದ ಪ್ರಸಂಗ ನಡೆಯಿತು.
ಮಂಗಳವಾರ ಪರಿಷತ್ನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ರಘುನಾಥ್ ಮಲ್ಕಾಪುರೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರು, ರಾಜ್ಯದಲ್ಲಿ 18572 ಶುದ್ಧ ಕುಡಿಯುವ ನೀರಿನ ಘಟಕಗಳು ಮಂಜುರಾಗಿವೆ. ಆ ಫೈಕಿ 15678 ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, 578 ಘಟಕಗಳು ದುರಸ್ತಿಯಲ್ಲಿವೆ ಎಂದು ವಿವರಣೆ ನೀಡಿದರು. ಈ ವಿವರಗಳಿಗೆ ತೃಪ್ತರಾಗದ ಬಿಜೆಪಿ ಸದಸ್ಯರು, ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಸಾಕಷ್ಟು ಅವ್ಯವಹಾರಗಳಾಗಿವೆ. ನೂರಾರು ಕೋಟಿ ರೂ.ಗಳು ದುರುಪಯೋಗವಾಗಿವೆ. ಸದನ ಸಮಿತಿ ರಚಿಸಬೇಕೆಂದು ಬಾವಿಗಿಳಿದು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿದರು.
ಈ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಆಗ ಮಧ್ಯ ಪ್ರವೇಶಿಸಿದ ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ಅವರು, ಪ್ರತಿಪಕ್ಷದ ಸದಸ್ಯರ ವಿರುದ್ಧ ಗರಂ ಆದರು. ಇಷ್ಟು ದಿವಸ ಸದನ ಹಾಳು ಮಾಡಿರುವುದು ಸಾಲದೆ ? ಏನಿದು ಮತ್ತೆ ಈ ರೀತಿ ಪ್ರತಿಭಟನೆ ಮಾಡುವುದು, ಸಭೆ ನಡೆಸುವುದು ಬೇಡವೆ? ನೀವು ಹೇಳಿದ ಹಾಗೆ ಉತ್ತರ ಕೊಡಬೇಕೆ? ಏನ್ರಿ ಇದು ಎಂದು ರೇಗಿದರು.
ಸಚಿವ ಕೃಷ್ಣ ಭೈರೇಗೌಡ ಮಾತನಾಡಿ, ಪದೇ ಪದೇ ಕೆಟ್ಟು ನಿಲ್ಲುತ್ತಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿ ಕಾರ್ಯ ಮಾಡಲಾಗುತ್ತಿದೆ. ಜಲ ತಜ್ಞ ರಾಜಾರಾಮ್ ನೇತೃತ್ವದಲ್ಲಿ ತಾಂತ್ರಿಕ ಸಮಿತಿಯನ್ನು ಮಾಡಲಾಗಿದ್ದು, ಅಲ್ಲಿಂದ ವರದಿ ಬಂದ ನಂತರ ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ಕ್ರಮ ವಹಿಸುತ್ತೇವೆ ಎಂದರು.
ಪ್ರತಿಭಟನಾ ನಿರತ ಸದಸ್ಯರ ವಿರುದ್ಧ ಹರಿಹಾಯ್ದ ಸಚಿವರು, ಸದನ ಸಮಿತಿ ಮೂಲಕ ಸರಕಾರ ನಡೆಸಲು ಆಗುವುದಿಲ್ಲ. ಈಗಾಗಲೇ ನಾಲ್ಕೈದು ದಿನ ಕಲಾಪ ನಡೆದಿಲ್ಲ. ಬಿಜೆಪಿ ಸದಸ್ಯರಿಗೆ ಅಧಿವೇಶನ ನಡೆಸುವ ಆಸಕ್ತಿ ಇಲ್ಲ ಎಂದು ರೇಗಿದರು. ಪ್ರತಿಭಟನಾ ನಿರತ ಬಿಜೆಪಿ ಸದಸ್ಯರು ತಮ್ಮ ಪಟ್ಟು ಸಡಿಲಿಸದೆ ಗದ್ದಲ ಮುಂದುವರೆಸಿದ ಹಿನ್ನೆಲೆಯಲ್ಲಿ ಸಭಾಪತಿಯವರು ಸದನವನ್ನು ಬುಧವಾರಕ್ಕೆ ಮುಂದೂಡಿದರು.
ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಮಾತನಾಡಿ, ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣದಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ ನಡೆದಿದೆ. ನಾವು ಮಂತ್ರಿಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪ ಮಾಡಿಲ್ಲ. ಈಗಾಗಿರುವ ಅವ್ಯವಸ್ಥೆ ಬಗ್ಗೆ ಸದನ ಸಮಿತಿ ರಚನೆ ಮಾಡಿ ಎಂದು ಹೇಳಿದ್ದೇವೆ ಎಂದು ತಿಳಿಸಿದರು.







