ಹಿಂದುಳಿದ ವರ್ಗದಿಂದ ದೇಶದ ಸಂಸ್ಕೃತಿಗೆ ಕೊಡುಗೆ: ದಿನಕರ ಬಾಬು

ಉಡುಪಿ, ಫೆ.12: ಹಿಂದುಳಿದ ವರ್ಗದ ಹಲವು ಮಂದಿ ದೇಶದ ಸಂಸ್ಕೃತಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಹಿಂದುಳಿದ ವರ್ಗದ ಹಲವಾರು ಲೇಖಕರು, ಮಹರ್ಷಿಗಳು ಸಮಾಜವನ್ನು ಕಟ್ಟುವ ಕೆಲಸವನ್ನೂ ಮಾಡಿದ್ದಾರೆ ಎಂದು ಉಡುಪಿ ಜಿಪಂನ ಅದ್ಯಕ್ಷ ದಿನಕರ ಬಾಬು ಹೇಳಿದ್ದಾರೆ.
ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಉಡುಪಿ ಜಿಲ್ಲಾ ಸವಿತಾ ಸಮಾಜ ಇವರ ಸಂಯುಕ್ತ ಆಶ್ರಯದಲ್ಲಿ ಅಂಬಲಪಾಡಿಯ ಜಿಲ್ಲಾ ಸವಿತಾ ಸಮುದಾಯ ಭವನದಲ್ಲಿ ನಡೆದ ಸವಿತಾ ಮಹರ್ಷಿ ಜಯಂತಿ ಉದ್ಘಾಟಿಸಿ ಅವು ಮಾತನಾಡುತಿದ್ದರು.
ಸವಿತಾ ಎಂದರೆ ಸಕಲವನ್ನು ತಿಳಿದವರು ಎಂಬ ಅರ್ಥ ಇದೆ. ಸವಿತಾ ಸಮಾಜದ ಕುಲಗುರು ಸವಿತಾ ಮಹರ್ಷಿಗಳು. ಹಿಂದುಳಿದ ವರ್ಗಗಳ ಹಲವು ಮಂದಿ ದೇಶದ ಸಂಸ್ಕೃತಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ರಾಮಾಯಣ ರಚಿಸಿದ ವಾಲ್ಮೀಕಿ ಸಹ ಹಿಂದುಳಿದ ವರ್ಗಕ್ಕೆ ಸೇರಿದವರು. ಸರಕಾರ ಎಲ್ಲಾ ವರ್ಗಗಳ ಮಹಾನ್ ವ್ಯಕ್ತಿಗಳ ಜಯಂತಿ ಆಚರಣೆ ಮಾಡುವುದರ ಮೂಲಕ ಇಂದಿನ ಜನಾಂಗಕ್ಕೆ ಅವರು ನೀಡಿರುವ ಕೊಡುಗೆ ಮತ್ತು ಅವರ ಸಾಧನೆಗಳ ಕುರಿತು ಅರಿವು ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.
ಉದ್ಯಾವರದ ಎಸ್‌ಡಿಎಂ ಆಯುರ್ವೇದ ಕಾಲೇಜಿನ ಹಿರಿಯ ಪ್ರಾಧ್ಯಾಪಕ ಹಾಗೂ ಸಂಶೋಧನಾಧಿಕಾರಿ ನವೀನ್‌ಚಂದ್ರ ಭಂಡಾರಿ ಸವಿತಾ ಮಹರ್ಷಿ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್‌ರಾವ್, ಉಡುಪಿ ಸವಿತಾ ಸಮಾಜ ಅಧ್ಯಕ್ಷ ರಾಜು ಸಿ. ಭಂಡಾರಿ ಕಿನ್ನಿಮುಲ್ಕಿ, ನಗರಸಭಾ ಸದಸ್ಯ ಹರೀಶ್ ಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪೂರ್ಣಿಮಾ ಉಪಸ್ಥಿತರಿದ್ದರು. ಜಿಲ್ಲಾ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಆರ್. ಚಂದ್ರಶೇಖರ್ ಸ್ವಾಗತಿಸಿದರು.








