ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಅರ್ಹ ಸಂತ್ರಸ್ಥರಿಗೆ ನಿವೇಶನ ನೀಡಲು ಕ್ರಮ: ಡಿ.ಕೆ.ಶಿವಕುಮಾರ್

ಬೆಂಗಳೂರು, ಫೆ.12: ಕೃಷ್ಣಾ ಮೇಲ್ದಂಡೆ ಯೋಜನೆಯಡಿಯಲ್ಲಿ ಎಲ್ಲ ಸಂತ್ರಸ್ಥರಿಗೆ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಂಗಳವಾರ ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ನಿರಾಣಿ ಹನಮಂತ ರುದ್ರಪ್ಪ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪುನರ್ವಸತಿ ಕೇಂದ್ರದಲ್ಲಿ ಅವಶ್ಯಕತೆಯಿರುವ ಮೂಲಭೂತ ಸೌಲಭ್ಯಗಳನ್ನು ಈಗಾಗಲೇ ಒದಗಿಸಲಾಗಿದೆ. ಇದರೊಂದಿಗೆ 2016-17ರ ಸರಕಾರದ ಆದೇಶದಂತೆ 325.34 ಕೋಟಿ ವಿಶೇಷ ಅನುದಾನದಲ್ಲಿ ಅಗತ್ಯ ಹೆಚ್ಚುವರಿ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು. ಆಲಮಟ್ಟಿ ಡ್ಯಾಂ ಎತ್ತರಿಸುವ ಸಂದರ್ಭದಲ್ಲಿ ಹಾಗೂ ಪ್ರವಾಹದ ಸಂದರ್ಭದಲ್ಲಿ ಬಾಧಿತಗೊಳಪಡಬಹುದಾದ ಸಂತ್ರಸ್ಥರಿಗೆ ಆದ್ಯತೆ ಮೇಲೆ ನಿವೇಶನಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ಸಮತೋಲನ ಜಲಾಶಯ ನಿರ್ಮಾಣ: ಕಾಂಗ್ರೆಸ್ ಸದಸ್ಯ ಎನ್.ಎಸ್. ಬೋಸ್‌ರಾಜು ಅವರು ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವ ಡಿ.ಕೆ.ಶಿವಕುಮಾರ್ ಅವರು, ತುಂಗಭದ್ರಾ ಜಲಾಶಯದ ಹೂಳಿನಿಂದ ಉಂಟಾಗಿರುವ ನೀರಿನ ಕೊರತೆಯನ್ನು ಸರಿದೂಗಿಸಲು 2018-19ನೆ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ ಗಂಗಾವತಿ ತಾಲೂಕಿನ ನವಲಿ ಗ್ರಾಮದ ಹತ್ತಿರ ಸಮತೋಲನ ಜಲಾಶಯ ನಿರ್ಮಿಸಿ ಮಳೆಗಾಲದಲ್ಲಿ ಪ್ರವಾಹ ನಾಲೆ ಮೂಲಕ ನೀರನ್ನು ಶೇಖರಿಸುವ ಪ್ರಸ್ತಾವನೆಯನ್ನು ತುಂಗಭದ್ರಾ ಮಂಡಳಿಗೆ ಸಲ್ಲಿಸಿದ್ದು ಮಂಡಳಿಯ ಪರಿಶೀಲನೆ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ನಾರಾಯಣಪುರ ಬಲದಂಡೆ ಕಾಲುವೆ ವಿಸ್ತರಣೆ ಪ್ರಸ್ತುತ 95 ಕೀ ಮೀ ನಿಂದ 130 ಕಿ.ಮೀ ವರೆಗೆ ಕಾಮಗಾರಿ ಪೂರ್ಣಗೊಂಡಿದ್ದು ಅದನ್ನು 168 ಕಿ.ಮೀ ವರೆಗೆ ವಿಸ್ತರಿಸುವ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು ಕೆಲಸ ಪ್ರಗತಿಯಲ್ಲಿರುತ್ತದೆ. ಮುಂದುವರೆದು ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆ 130 ರಿಂದ 168.50 ಕಿ.ಮೀ ವರೆಗೆ ನಿರ್ಮಾಣದ ಕಾರ್ಯ ಕೈಗೆತ್ತಿಕೊಂಡಿದ್ದು, ಇದರ ಪ್ರಗತಿ ವಿವಿಧ ಹಂತದಲ್ಲಿರುತ್ತದೆ. ಜೊತೆಗೆ ಕೃಷ್ಣಾ ನದಿ ಪಾತ್ರದಿಂದ ಗಣೇಕಲ್ ಜಲಾಶಯಕ್ಕೆ ನೀರು ತುಂಬಿಸುವ ಯೋಜನೆಯನ್ನು 2019-20 ನೆ ಸಾಲಿನ ಆಯವ್ಯಯದ ಭಾಷಣದಲ್ಲಿ ಘೋಷಣೆ ಮಾಡಲಾಗಿರುತ್ತದೆ ಎಂದರು.







