ಕೇರಳ ಪ್ರವಾಸೋದ್ಯಮ ಮರು ಆರಂಭ: ವಿ.ಅನಿಲ್

ಬೆಂಗಳೂರು, ಫೆ.12: ಪ್ರಕೃತಿ ವಿಕೋಪದ ಬಳಿಕ ಕೇರಳ ಸುಧಾರಣೆಗೊಂಡಿದ್ದು, ಎಂದಿನಂತೆ ಪ್ರವಾಸೋದ್ಯಮ ಮರು ಆರಂಭವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯಕ್ಕೆ ಭೇಟಿ ನೀಡಬಹುದು ಎಂದು ಕೇರಳ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ವಿ.ಅನಿಲ್ ರಾಜ್ಯದ ಜನತೆಯನ್ನು ಆಹ್ವಾನಿಸಿದ್ದಾರೆ.
ಮಂಗಳವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಪ್ರವಾಸೋದ್ಯಮ ವಿಸ್ತರಣಾ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನದಿಗಳ ತವರೂರು ಎನಿಸಿರುವ ಕೇರಳ ಆಯುರ್ವೇದಿಕ್ ಕ್ಷೇತ್ರದಲ್ಲೂ ಛಾಪು ಮೂಡಿಸಿದೆ. ಅಲ್ಲದೆ ಪಶ್ಚಿಮ ಘಟ್ಟವನ್ನು ಹೊಂದಿರುವ ಈ ರಾಜ್ಯಕ್ಕೆ ವಿದೇಶಿಗರು ಕೂಡ ಅಧಿಕ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಭವಿಷ್ಯತ್ತಿನ ಹೂಡಿಕೆಗೂ ಹೇಳಿ ಮಾಡಿಸಿದ ತಾಣವಾಗಿದೆ ಎಂದು ಹೇಳಿದರು.
ಕೇರಳವು ಹಿಂದೆಂದೂ ಕಂಡು ಕೇಳರಿಯದ ಮಟ್ಟಿಗೆ 2018 ರಲ್ಲಿ ದಿಢೀರ್ ಅಪ್ಪಳಿದ ಪ್ರಕೃತಿ ವಿಕೋಪದಲ್ಲಿ ಪ್ರವಾಸೋದ್ಯಮಕ್ಕೆ ಪೆಟ್ಟುಬಿದ್ದಿತ್ತು. ಆದರೆ ಈಗ ಚೇತರಿಸಿಕೊಂಡು ಸಹಜ ಸ್ಥಿತಿಯತ್ತ ಮರಳುತ್ತಿದೆ. ಕಣ್ಣೂರಿನಲ್ಲಿ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾದ ಮೇಲೆ ಕೇರಳ ಪ್ರವಾಸೋದ್ಯಮಕ್ಕೆ ಮತ್ತಷ್ಟು ವರದಾನವಾಗಿದೆ. ಬೇಕಲ್ ಮತ್ತು ವಯನಾಡ್ ಸೇರಿದಂತೆ ಉತ್ತರ ಕೇರಳವನ್ನು ಅಭಿವೃದ್ದಿಪಡಿಸಲಾಗಿದ್ದು ವಳಿಯಪರಂಬಾ ಹಿನ್ನೀರು ಪ್ರದೇಶ, ಕುಪ್ಪಂ ಮತ್ತು ರಾಣಿಪುರಂ ನಂತಹ ಪ್ರದೇಶಗಳಿಗೂ ಆದ್ಯತೆ ನೀಡಲಾಗಿದೆ ಎಂದರು.
ಕರ್ನಾಟಕಕ್ಕೆ 2 ನೇ ಸ್ಥಾನ: ಕೇರಳವು ದೇಶದಲ್ಲಿಯೇ ಪ್ರವಾಸೋದ್ಯಮದಲ್ಲಿ ಅತಿ ಹೆಚ್ಚು ಜನರನ್ನು ಆಕರ್ಷಿಸುತ್ತಿದೆ. ಅದರಲ್ಲಿ ತಮಿಳುನಾಡಿನಿಂದ ವಾರ್ಷಿಕವಾಗಿ 13 ಲಕ್ಷ, ಕರ್ನಾಟಕದಿಂದ 10 ಲಕ್ಷ ಪ್ರವಾಸಿಗರು ಭೇಟಿ ನೀಡುವ ಮೂಲಕ ಎರಡನೇ ಸ್ಥಾನದಲ್ಲಿದೆ. ಹೀಗಾಗಿ, ಮುಂದೆಯೂ ಹೆಚ್ಚು ಹೆಚ್ಚು ಜನರು ಭೇಟಿ ನೀಡುವ ಮೂಲಕ ಪ್ರವಾಸೋದ್ಯಮಕ್ಕೆ ಮತ್ತಷ್ಟು ಮೆರುಗು ತಂದುಕೊಡಬೇಕು ಎಂದು ಅವರು ಮನವಿ ಮಾಡಿದರು.







