ಉಡುಪಿ ಜಿಲ್ಲೆಯಲ್ಲಿ 4 ಮಂಗಗಳ ಅಟಾಪ್ಸಿ

ಉಡುಪಿ, ಫೆ.12: ಜಿಲ್ಲೆಯ ವಿವಿಧೆಡೆಗಳಲ್ಲಿ ಮಂಗಳವಾರ ಒಟ್ಟು ಐದು ಮಂಗಗಳ ಕಳೇಬರ ಪತ್ತೆಯಾಗಿದ್ದು, ಇವುಗಳಲ್ಲಿ ನಾಲ್ಕು ಮಂಗಗಳ ಪೋಸ್ಟ್ ಮಾರ್ಟಂ ನಡೆಸಿ, ವಿಸೇರಾವನ್ನು ಮಣಿಪಾಲ ಮತ್ತು ಶಿವಮೊಗ್ಗಗಳ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ ಎಂದು ಮಂಗನ ಕಾಯಿಲೆಯ ಜಿಲ್ಲಾ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ.
ಬ್ರಹ್ಮಾವರ ಸಮುದಾಯ ಆಸ್ಪತ್ರೆ ವ್ಯಾಪ್ತಿಯ ಚಾಂತಾರು ಅಗ್ರಹಾರ, ಕರ್ಜೆ ಪಿಎಚ್‌ಸಿ ವ್ಯಾಪ್ತಿಯ ಕೆಂಜೂರು, ಕೊರ್ಗಿ ಪಿಎಚ್‌ಸಿ ವ್ಯಾಪ್ತಿಯ ಕಾಳಾವರ ಸಲ್ವಾಡಿ, ಅಜೆಕಾರಿನ ಮೂಡುಕುಡೂರು ಹಾಗೂ ಕೊಳಲಗಿರಿ ಪಿಎಚ್‌ಸಿಯ ಹಾವಂಜೆಗಳಲ್ಲಿ ಇಂದು ಮಂಗಗಳ ಕಳೇಬರಗಳು ಪತ್ತೆಯಾಗಿದ್ದು, ಇವುಗಳಲ್ಲಿ ಅಜೆಕಾರಿನ ಮಂಗವನ್ನು ಹೊರತು ಪಡಿಸಿ ಚಾಂತಾರು, ಕೆಂಜೂರು, ಕಾಳಾವರ ಸಲ್ವಾಡಿ ಹಾಗೂ ಹಾವಂಜೆಗಳಲ್ಲಿ ದೊರೆತ ಮಂಗಗಳ ಅಟಾಪ್ಸಿ ನಡೆಸಲಾಗಿದೆ ಎಂದವರು ತಿಳಿಸಿದರು.
ಈ ಮೂಲಕ ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 57 ಮಂಗಗಳ ಅಟಾಪ್ಸಿ ನಡೆಸಲಾಗಿದ್ದು, 52ರ ವರದಿ ಬಂದಿವೆ. 12ರಲ್ಲಿ ಕೆಎಫ್‌ಡಿ ವೈರಸ್ ಪತ್ತೆಯಾದರೆ, ಉಳಿದ 40ರಲ್ಲಿ ಸೋಂಕು ಪತ್ತೆಯಾಗಿಲ್ಲ. ಇನ್ನು 5ರ ವರದಿ ಬರಬೇಕಾಗಿದೆ. ಕಳೆದ ಜ.19ರ ನಂತರ ಜಿಲ್ಲೆಯಲ್ಲಿ ಪತ್ತೆಯಾದ ಯಾವುದೇ ಮಂಗನ ದೇಹದಲ್ಲಿ ವೈರಸ್ ಸೋಂಕು ಪತ್ತೆಯಾಗಿಲ್ಲ ಎಂದು ಡಾ.ಭಟ್ ತಿಳಿಸಿದರು.
ಮಂದಾರ್ತಿಯಲ್ಲೂ ನಗೆಟೀವ್: ಇಂದು ಮಂದಾರ್ತಿ ಪರಿಸರದಿಂದ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾದ ರೋಗಿಯೊಬ್ಬರ ರಕ್ತವನ್ನು ಶಂಕಿತ ಮಂಗನಕಾಯಿಲೆಗಾಗಿ ಪರೀಕ್ಷೆಗೊಳಪಡಿಸಿದ್ದು, ಇದರಲ್ಲಿ ಯಾವುದೇ ಸೋಂಕು ಪತ್ತೆಯಾಗಿಲ್ಲ. ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ 31 ಮಂದಿ ರೋಗಿಗಳ ರಕ್ತವನ್ನು ಶಂಕಿತ ಕೆಎಫ್‌ಡಿ ವೈರಸ್‌ಗಾಗಿ ಪರೀಕ್ಷೆಗೊಳಪಡಿಸಲಾಗಿದ್ದು, ಯಾವುದರಲ್ಲೂ ಸೋಂಕು ಕಂಡುಬಂದಿಲ್ಲ ಎಂದವರು ವಿವರಿಸಿದರು.
ಮಂಗಗಳಲ್ಲಿ ಸೋಂಕು ಪತ್ತೆಯಾಗಿರುವ ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಮಂಗನಕಾಯಿಲೆ ತಡೆಗಟ್ಟಲು ನೀಡುವ ಡಿಎಂಸಿ ತೈಲ, ಔಷಧಿ ಹಾಗೂ ಇತರ ಅಗತ್ಯ ವಸ್ತುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಶೇಖರಿಸಿಡಲಾಗಿದೆ. ಇಲ್ಲಿ ಯಾವುದಕ್ಕೂ ಕೊರತೆಯಾಗದಂತೆ ನೋಡಿ ಕೊಳ್ಳಲಾಗಿದೆ ಎಂದು ಡಾ.ಪ್ರಶಾಂತ್ ಭಟ್ ತಿಳಿಸಿದರು.
ಮಂಗನ ಕಾಯಿಲೆಯ ಕುರಿತು ಗ್ರಾಮ ಗ್ರಾಮಗಳಲ್ಲಿ ಜಾಗೃತಿ ಮೂಡಿಸಲು ಕುಂದಾಪುರ ತಾಲೂಕಿನಾದ್ಯಂತ ಸಂಚರಿಸುತ್ತಿರುವ ಮೊಬೈಲ್ ಮೆಡಿಕಲ್ ಯುನಿಟ್ ಇಂದು ಕಿರುಮಂಜೇಶ್ವರ ಪರಿಸರದಲ್ಲಿ ಕೆಎಫ್‌ಡಿ ಕುರಿತು ಜನರಲ್ಲಿ ಜಾಗೃತಿ ಮೂಡಿಸಿತು. ಬ್ರಹ್ಮಾವರದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ವಾರಂಬಳ್ಳಿ ಪಂಚಾಯತ್‌ನಲ್ಲಿ ವಿಶೇಷ ಗ್ರಾಮ ಸಭೆದಲ್ಲಿ ಮಂಗನ ಕಾಯಿಲೆ ಬಗ್ಗೆ ಮಾಹಿತಿಗಳನ್ನು ಗ್ರಾಮಸ್ಥರಿಗೆ ನೀಡಿದರು.
ಅದೇ ರೀತಿ ಹೆಗ್ಗುಂಜೆ ಗ್ರಾಪಂನಲ್ಲೂ ಇಂದು ವಿಶೇಷ ಹಗ್ರಾಮ ಸಭೆ ನಡೆಯಿತು. ಆರೋಗ್ಯ ಇಲಾಖೆಯು ಪಶು ವೈದ್ಯಕೀಯ ಇಲಾಖೆ, ಅರಣ್ಯ ಇಲಾಖೆ ಹಾಗೂ ಗ್ರಾಪಂಗಳ ಸಹಕಾರದೊಂದಿಗೆ ಕಾಯಿಲೆ ಮನುಷ್ಯರಿಗೆ ಹರಡದಂತೆ ತಡೆಯುವಲ್ಲಿ ವಿಶೇಷ ಪ್ರಯತ್ನದಲ್ಲಿ ನಿರತವಾಗಿದ್ದು, ಈವರೆಗೆ ಇಲಾಖೆಯ ಪ್ರಯತ್ನ ಫಲ ನೀಡಿದೆ ಎಂದು ಅವರು ನುಡಿದರು.










