ಶಾಲಾ ವೆಬ್‌ಸೈಟ್‌ನಲ್ಲಿ ಕಡ್ಡಾಯವಾಗಿ ಪ್ರವೇಶ ಶುಲ್ಕ ಪ್ರಕಟಿಸಲು ಆದೇಶ ?
ಬೆಂಗಳೂರು, ಫೆ.12: ಖಾಸಗಿ ಶಾಲೆಗಳ ಪ್ರವೇಶ ಶುಲ್ಕವನ್ನು ಶಾಲಾ ವೆಬ್‌ಸೈಟ್‌ನಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು ಎಂದು ಆದೇಶ ಹೊರಡಿಸಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ.
ಖಾಸಗಿ ಶಾಲೆಗಳು ಹೆಚ್ಚು ಹೆಚ್ಚು ಶುಲ್ಕ ವಸೂಲಿ ಮಾಡಲಾಗುತ್ತಿವೆ ಎಂಬ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಶುಲ್ಕದ ಮಾಹಿತಿ ಶಾಲಾ ವೆಬ್‌ಸೈಟ್‌ನಲ್ಲಿ ಪ್ರಕಟಿಸುವುದನ್ನು ಕಡ್ಡಾಯ ಮಾಡಲು ಇಲಾಖೆ ಮುಂದಾಗಿದೆ. ಇದರಿಂದ ಶುಲ್ಕದ ಸಂಪೂರ್ಣ ಮಾಹಿತಿ ಪಡೆದ ಬಳಿಕ ಪೋಷಕರು ಮಕ್ಕಳನ್ನು ಅನುಕೂಲಕ್ಕೆ ತಕ್ಕ ಶಾಲೆಯಲ್ಲಿ ದಾಖಲು ಮಾಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2019-20 ನೆ ಶೈಕ್ಷಣಿಕ ವರ್ಷದಿಂದಲೇ ಜಾರಿಯಾಗುವ ಸಾಧ್ಯತೆ ಇದೆ. ಶುಲ್ಕದ ವಿವರ ಮಾಹಿತಿ ಫಲಕದಲ್ಲಿ ಪ್ರಕಟಿಸದ ಶಾಲೆಗಳ ಕುರಿತು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ಜ.23 ರೊಳಗೆ ಅಳವಡಿಸಬೇಕು ಎಂದೂ ಅಂತಿಮ ಗಡುವು ನೀಡಲಾಗಿತ್ತು.
ರಾಜ್ಯದಲ್ಲಿ ಒಟ್ಟು 16,737 ಖಾಸಗಿ ಶಾಲೆಗಳಿದ್ದು, ಈ ಪೈಕಿ ಇದುವರೆಗೂ ಎರಡು ಸಾವಿರಕ್ಕೂ ಅಧಿಕ ಶಾಲೆಗಳು ಇನ್ನೂ ಫಲಕವನ್ನೇ ಅಳವಡಿಸಿಲ್ಲ. ಶಾಲಾ ಆಡಳಿತ ಮಂಡಳಿ ಶುಲ್ಕದ ಮಾಹಿತಿಯನ್ನು ವೆಬ್‌ಸೈಟ್ ಮುಖಪುಟದಲ್ಲಿಯೇ ಪ್ರಕಟಿಸಬೇಕು. ಜತೆಗೆ ಶಿಕ್ಷಕರ ಮಾಹಿತಿ ಮತ್ತು ಎಸೆಸ್ಸೆಲ್ಸಿ ವಿದ್ಯಾರ್ಥಿಗಳ ಮೂರು ವರ್ಷದ ಫಲಿತಾಂಶವನ್ನೂ ಪ್ರಕಟಿಸಬೇಕು ಎಂದು ಇಲಾಖೆ ಆದೇಶಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.







