ಮಣ್ಣಗುಡ್ಡೆ: ಬೆಂಕಿ ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಸಾವು
ಮಂಗಳೂರು, ಫೆ.12: ನಗರದ ಮಣ್ಣಗುಡ್ಡೆ ಸಮೀಪ ಬಾಡಿಗೆ ಮನೆಯೊಂದರಲ್ಲಿ ಗಂಡನ ಜತೆ ವಾಸಿಸುತ್ತಿದ್ದ ಮಹಿಳೆಯೊಬ್ಬರು ಬೆಂಕಿ ತಗುಲಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಲಿಸದೆ ಮಂಗಳವಾರ ಮೃತಪಟ್ಟಿದ್ದಾರೆ.
ಮೂಲತಃ ಉತ್ತರ ಪ್ರದೇಶ ನಿವಾಸಿ ಸರೀತಾ (25) ಮೃತಪಟ್ಟವರು.
ಪ್ರಕರಣ ವಿವರ: ನಗರದಲ್ಲಿ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದ ಸಂತೋಷ್ ಉತ್ತರ ಪ್ರದೇಶದವರಾಗಿದ್ದು, ತನ್ನ ಹೆಂಡತಿ ಸರೀತಾ ಜತೆ ಮಣ್ಣಗುಡ್ಡೆ ಕಾಂತರಾಜ್ ಲೇನ್ ಸುನೀಲ್ ಕಂಪೌಂಡ್‌ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಸರಿತಾ ಅವರು ಜ.12ರಂದು ರಾತ್ರಿ 10 ಗಂಟೆಗೆ ಗ್ಯಾಸ್ ಸ್ಟೌ ಬಳಸಿ ಅಡುಗೆ ಮಾಡಿ, ತನ್ನ ಸೀರೆಯ ಸೆರಗು ಬಳಸಿ ಪಾತ್ರೆ ತೆಗೆಯುತ್ತಿದ್ದ ವೇಳೆ ಅಚಾನಕ್ ಆಗಿ ಬೆಂಕಿ ಸೀರೆಗೆ ತಗುಲಿದೆ. ಇದರಿಂದ ಒಮ್ಮೆಲೆ ಬೆಂಕಿ ಮೈಗೆ ಆವರಿಸಿದ್ದು ಬೊಬ್ಬೆ ಹಾಕಿದ್ದಾರೆ.
ಕೂಡಲೇ ಸಂತೋಷ್ ಓಡಿ ಬಂದು ಬೆಂಕಿ ನಂದಿಸಿದರೂ ದೇಹ ಮಾತ್ರ ಬಹುತೇಕ ಸುಟ್ಟು ಹೋಗಿತ್ತು. ಕೂಡಲೇ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸರೀತಾ ಅವರು ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಮೃತಪಟ್ಟಿದ್ದಾರೆ.
ಈ ಕುರಿತು ಬರ್ಕೆ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.





