ಸುಳ್ಳು ಜಾತಿ ಪ್ರಮಾಣಪತ್ರ ನೀಡಿ ವಂಚನೆ: ಪ್ರಕರಣ ದಾಖಲು
ಮಂಗಳೂರು, ಫೆ.12: ವ್ಯಕ್ತಿಯೊಬ್ಬರು ಸುಳ್ಳು ದಾಖಲೆಗಳನ್ನು ಸಲ್ಲಿಸಿ ಸುಳ್ಳು ಜಾತಿ ಪ್ರಮಾಣಪತ್ರ ನೀಡಿ ಎಸ್ಸಿ-ಎಸ್ಟಿ ವರ್ಗಗಳಿಗೆ ಹಾಗೂ ಸರಕಾರಕ್ಕೆ ವಂಚಿಸಿರುವ ಬಗ್ಗೆ ಮಂಗಳೂರು ನಗರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಂಚಾಡಿ ಮೇರಿಹಿಲ್ ನಿವಾಸಿ ಎಂ.ಶಿವನಾಥನ್ ಎಂಬವರೇ ಸುಳ್ಳು ಜಾತಿ ಪ್ರಮಾಣಪತ್ರ ನೀಡಿ ವಂಚಿಸಿದರು ಎನ್ನಲಾಗಿದೆ.
ಎಂ.ಶಿವನಾಥನ್ ಮೂಲತಃ ನಾಯ್ಡು ಜಾತಿಗೆ ಸೇರಿದವರಾಗಿದ್ದು, ಇವರು 2017ರ ಎಪ್ರಿಲ್ 3ರಂದು ಮಂಗಳೂರು ತಹಶೀಲ್ದಾರ್‌ರಿಂದ ತಾನು ಪರಿಶಿಷ್ಟ ಜಾತಿಯ ಭೋವಿ ಜಾತಿಯವರೆಂದು ಸುಳ್ಳು ಜಾತಿ ಪ್ರಮಾಣಪತ್ರ ಪಡೆದಿದ್ದರು. ಅದರ ಆಧಾರದಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ ಮೀಸಲಿಟ್ಟ ಸರಕಾರದ ಸೌಲಭ್ಯವನ್ನು ಪಡೆದುಕೊಂಡು ನಿಜವಾದ ಪರಿಶಿಷ್ಟ ಜಾತಿಯವರಿಗೆ ಹಾಗೂ ಸರಕಾರಕ್ಕೆ ವಂಚಿಸಿರುವುದಾಗಿ ದೂರು ದಾಖಲಾಗಿದೆ.
ಜತೆಗೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪ್ರಾದೇಶಿಕ ಕಚೇರಿಯಲ್ಲೂ ಪ್ರಕರಣ ತನಿಖೆಯಲ್ಲಿದೆ ಎಂದು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಮಂಗಳೂರು ಪ್ರಾದೇಶಿಕ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.





