ಪುಲ್ವಾಮಾ ಎನ್‌ಕೌಂಟರ್: ಯೋಧ ಹುತಾತ್ಮ, ಉಗ್ರ ಹತ

ಜಮ್ಮುಕಾಶ್ಮೀರ, ಫೆ. 12: ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ರತ್ನಿಪೋರಾ ಪ್ರದೇಶದಲ್ಲಿ ಭದ್ರತಾ ಪಡೆ ಮಂಗಳವಾರ ನಡೆಸಿದ ಎನ್‌ಕೌಂಟರ್‌ನಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ ಹಾಗೂ ಓರ್ವ ಉಗ್ರ ಹತನಾಗಿದ್ದಾನೆ.
ಕಳೆದ ವರ್ಷ ಫೆಬ್ರವರಿಯಲ್ಲಿ ಶ್ರೀ ಮಹಾರಾಜಾ ಹರಿ ಸಿಂಗ್ ಆಸ್ಪತ್ರೆಯಲ್ಲಿ ಇಬ್ಬರು ಪೊಲೀಸರನ್ನು ಹತ್ಯೆಗೈದ ಪ್ರಕರಣದಲ್ಲಿ ಪಾಲ್ಗೊಂಡ ಹಿಜ್ಬುಲ್ ಮುಜಾಹಿದ್ದೀನ್‌ನ ಹಿಲಾಲ್ ಅಹ್ಮದ್ ರಾಥರ್ ಹತನಾದ ಉಗ್ರ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಪಟ್ಟ ಯೋಧನನ್ನು ಬಾಲಜೀತ್ ಸಿಂಗ್ ಎಂದು ಗುರುತಿಸಲಾಗಿದೆ.
ಈ ಎನ್‌ಕೌಂಟರ್‌ನಲ್ಲಿ ಇನ್ನೋರ್ವ ಯೋಧ ಕೂಡ ಗಾಯಗೊಂಡಿದ್ದಾರೆ. ಉಗ್ರರು ಅಡಗಿರುವ ಮಾಹಿತಿ ಹಿನ್ನೆಲೆಯಲ್ಲಿ ಭದ್ರತಾ ಪಡೆ ಮಂಗಳವಾರ ಮುಂಜಾನೆ ಈ ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯಾಚರಣೆ ನಡೆಸಿತು. ಈ ಸಂದರ್ಭ ಗುಂಡಿನ ಚಕಮಕಿ ನಡೆಯಿತು. ಹಿಲಾಲ್‌ನ ಮೃತದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಎನ್‌ಕೌಂಟರ್ ನಡೆದ ಪ್ರದೇಶದಿಂದ ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.





