ಮಂಗಳೂರು: ಪತ್ರಕರ್ತರಿಗೆ ಕ್ಷೇಮ ಆರೋಗ್ಯ ಕಾರ್ಡ್ ವಿತರಣೆ

ಮಂಗಳೂರು, ಫೆ.12: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ವತಿಯಿಂದ ನಿಟ್ಟೆ ವಿಶ್ವವಿದ್ಯಾಲಯದ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆ ಸಹಯೋದಲ್ಲಿ ಪತ್ರಕರ್ತರಿಗೆ ಕ್ಷೇಮ ಆರೋಗ್ಯ ಕಾರ್ಡ್ ವಿತರಣಾ ಸಮಾರಂಭ ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ನಡೆಯಿತು.
ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎನ್. ವಿನಯ ಹಗ್ಡೆ ಪತ್ರಕರ್ತರಿಗೆ ಕ್ಷೇಮ ಹೆಲ್ತ್ ಕಾರ್ಡ್ ವಿತರಿಸಿದರು.
ಈ ಸಂದರ್ಭ ಮಾತನಾಡಿದ ವಿನಯ ಹೆಗ್ಡೆ, ದೇಶದ ಆಗು ಹೋಗುಗಳನ್ನು ಜನರಿಗೆ ತಲುಪಿಸುವಲ್ಲಿ ಮಾಧ್ಯಮ ರಂಗ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಪ್ರಜಾಪ್ರಭುತ್ವದಲ್ಲಿ ಮಾಧ್ಯಮ ಕ್ಷೇತ್ರ ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸಿದರೆ ದೇಶದ ಅಭಿವೃದ್ಧಿ ಸಾಧ್ಯ. ಪತ್ರಕರ್ತರಿಗೆ ಆರೋಗ್ಯ ಸಮಸ್ಯೆ ಉಂಟಾದಾಗ ಅವರಿಗೆ ನೆರವಾಗುವುದು ನಮ್ಮ ಕರ್ತವ್ಯ ಎಂಬ ನೆಲೆಯಲ್ಲಿ ಆರೋಗ್ಯ ಕಾರ್ಡ್ ಒದಗಿಸಲಾಗಿದೆ. ನಮ್ಮ ಇತಿಮಿತಿಯೊಳಗೆ ವೈದ್ಯಕೀಯ ಸೌಲಭ್ಯ, ಆರ್ಥಿಕ ಸಹಾಯ ನೀಡಲು ನಾವು ಹಿಂಜರಿಯುವುದಿಲ್ಲ. ಆರೋಗ್ಯ ಕಾರ್ಡ್‌ಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಬಾರದ ರೀತಿಯಲ್ಲಿ ಸಂಸ್ಥೆ ಪತ್ರಕರ್ತರಿಗೆ ಸ್ಪಂದನೆ ನೀಡಲಿದೆ ಎಂದರು.
ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆ ಪಿಆರ್‌ಒ ಹೇಮಂತ್ ಶೆಟ್ಟಿ ಮಾತನಾಡಿ, ಕ್ಷೇಮ ಹೆಲ್ತ್ ಕಾರ್ಡ್ ಯೋಜನೆಯಲ್ಲಿ ಕಾರ್ಡ್ ಹೊಂದಿದ ಸದಸ್ಯ ಸೇರಿ ಕುಟುಂಬದ ನಾಲ್ಕು ಮಂದಿ ರಿಯಾಯಿತಿ ದರದಲ್ಲಿ ಚಿಕಿತ್ಸೆ ಪಡೆಯಬಹುದು. ಒಟ್ಟು ಒಮ್ಮೆಗೆ 9 ಸಾವಿರ ರೂ., ಒಟ್ಟು 30 ಸಾವಿರ ರೂ.ವರೆಗಿನ ಚಿಕಿತ್ಸೆಯನ್ನು ಪಡೆಯಬಹುದು. ಹೊರರೋಗಿ ವಿಭಾಗದಲ್ಲಿ ಶೇ. 30ರಷ್ಟು ರಿಯಾಯಿತಿ ಇದೆ. 97 ಮಂದಿ ಪತ್ರಕರ್ತರು ಆರೋಗ್ಯ ಕಾರ್ಡ್ ಪಡೆದುಕೊಂಡಿದ್ದು, ಸಂಸ್ಥೆ 47250 ರೂ. ಭರಿಸಿದೆ ಎಂದರು.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ, ಪತ್ರಕರ್ತರಿಗೆ ಆರೋಗ್ಯ ಸಮಸ್ಯೆ ಉಂಟಾದಾಗ ಆರ್ಥಿಕವಾಗಿ ಹೊರೆಯಾಗಬಾರದು ಎಂಬ ದೃಷ್ಟಿಯಿಂದ ಹೆರ್ಲ್ತ್ ಕಾರ್ಡ್ ಯೋಜನೆ ಒದಗಿಸಲಾಗಿದೆ. ಸಂಘದ ಮನವಿಗೆ ಸ್ಪಂದಿಸಿದ ನಿಟ್ಟೆ ಸಂಸ್ಥೆ ಈ ಯೋಜನೆಯನ್ನು ಕಾರ್ಯಗತಗೊಳಿಸಿ, ಪತ್ರಕರ್ತರಿಗೆ ಹೆಲ್ತ್ ಕಾರ್ಡ್ ನೀಡಿದೆ ಎಂದರು.
ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಕೆ. ಆನಂದ ಶೆಟ್ಟಿ, ಪ್ರೆಸ್‌ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಅಡ್ಕಸ್ಥಳ ಉಪಸ್ಥಿತರಿದ್ದರು.
ಪತ್ರಕರ್ತರಾದ ಅನ್ಸಾರ್ ಇನೋಳಿ ಹೆರ್ಲ್ತ್ ಕಾರ್ಡ್ ಪಡೆದವರ ವಿವರ ನೀಡಿದರು. ಹರೀಶ್ ಮೋಟುಕಾನ ವಂದಿಸಿದರು.







