ನನಗೆ ಗೈರು ಹಾಜರಾಗಲು ಅನುಮತಿ ಕೊಡಿ: ಸ್ಪೀಕರ್‌ಗೆ ಶಾಸಕ ಎ.ಟಿ.ರಾಮಸ್ವಾಮಿ ಪತ್ರ

ಬೆಂಗಳೂರು, ಫೆ. 13: ಕಲಾಪದಲ್ಲಿ ರಾಜ್ಯದ ಜನರ ಸಮಸ್ಯೆಗಳು ಹಾಗೂ ಅಭಿವೃದ್ಧಿಯ ಬಗ್ಗೆ ಚರ್ಚೆಯಾಗುತ್ತಿಲ್ಲ. ಹೀಗಾಗಿ ನನಗೆ ಸದನದಿಂದ ಗೈರಾಗಲು ಅನುಮತಿ ಕೊಡಿ ಎಂದು ಶಾಸಕ ಎ.ಟಿ.ರಾಮಸ್ವಾಮಿ, ಸ್ಪೀಕರ್ ರಮೇಶ್‌ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ಬುಧವಾರ ವಿಧಾನಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್, ಶಾಸಕ ಎ.ಟಿ.ರಾಮಸ್ವಾಮಿಯವರು ಪತ್ರ ಬರೆದಿರುವ ವಿಚಾರವನ್ನು ಸದನದ ಗಮನಕ್ಕೆ ತಂದರು. ಅಧಿವೇಶನದಲ್ಲಿ ಜನರ ಸಮಸ್ಯೆಗಳ ಬಗ್ಗೆ, ಅಭಿವೃದ್ಧಿಯ ಬಗ್ಗೆ ಚರ್ಚೆಯಾಗಬೇಕು. ಆದರೆ, ಶಾಸನಸಭೆಯಲ್ಲಿ ಸದಸ್ಯರುಗಳ ನೈತಿಕತೆಯ ಮಟ್ಟದ ಬಗ್ಗೆ ಚರ್ಚೆಯಾಗುತ್ತಿರುವುದು ವಿಷಾದನೀಯ.
ಬೆಳಗಾವಿ ಅಧಿವೇಶನದಲ್ಲಿ ಬೆಂಗಳೂರಿನ ಸುತ್ತಮುತ್ತ ಭೂಗಳ್ಳರು ನಕಲಿ ದಾಖಲೆ ಸೃಷ್ಟಿಸಿ ಸರಕಾರಿ ಭೂಮಿ ಕಬಳಿಸಿರುವುದನ್ನು ಚರ್ಚಿಸಲು ಪ್ರಯತ್ನಿಸಿದೆ. ಆದರೆ ಅದು ಸಾಧ್ಯವಾಗಲಿಲ್ಲ. ಪ್ರಸ್ತುತ ಅಧಿವೇಶನದಲ್ಲಿ ಚರ್ಚಿಸಲು ಅವಕಾಶಗಳು ಕಾಣಿಸುತ್ತಿಲ್ಲ. ಸಾವಿರಾರು ಕೋಟಿ ರೂ.ಸರಕಾರಿ ಆಸ್ತಿಯನ್ನು ರಕ್ಷಣೆ ಮಾಡಲು ಸಾಧ್ಯವಾಗದಿದ್ದರೆ ನಾವು ವಿಧಾನಸಭೆಯಲ್ಲಿದ್ದು ಪ್ರಯೋಜನವೇನು ಎಂದು ಪ್ರಶ್ನಿಸಿದ್ದಾರೆ.
ಅಧಿವೇಶನದಲ್ಲಿ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳುವುದು ಮತ್ತು ಪ್ರಶ್ನೆಗಳಿಗೆ ಉತ್ತರ ನಿರೀಕ್ಷಿಸುವುದು ಸದಸ್ಯರ ಹಕ್ಕು. ಆ ಹಕ್ಕುಗಳಿಗೆ ಧಕ್ಕೆ ಉಂಟಾಗುತ್ತಿದೆ. ಸದನದಲ್ಲಿ ಅವಕಾಶ ದೊರೆಯದಿದ್ದರೆ ಸದನದಿಂದ ಹೊರ ನಡೆದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಮತ್ತು ಕ್ಷೇತ್ರದ ಜನರ ಜೊತೆಯಲ್ಲಿ ಇರಬೇಕಾಗುತ್ತದೆ. ಆದುದರಿಂದ ನನಗೆ ಸದನದಿಂದ ಗೈರು ಹಾಜರಾಗಲು ಅನುಮತಿ ನೀಡಬೇಕು ಎಂದು ಎ.ಟಿ.ರಾಮಸ್ವಾಮಿ ಪತ್ರದಲ್ಲಿ ಮನವಿ ಮಾಡಿದ್ದಾರೆ.
‘ಸದನದಲ್ಲಿ ನಿರೀಕ್ಷಿತ ಫಲ ಸಿಗುತ್ತಿಲ್ಲ ಎಂದು ಹಿರಿಯ ಸದಸ್ಯ ಎ.ಟಿ.ರಾಮಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ರೀತಿ ಆರೇಳು ಮಂದಿ ಸದಸ್ಯರು ಪತ್ರ ಬರೆದರೆ ಸಾರ್ವಜನಿಕವಾಗಿ ನನ್ನ ಬಗ್ಗೆ ಹಾಗೂ ಸದನದ ಬಗ್ಗೆ ಎಂತಹ ಅಭಿಪ್ರಾಯ ಬರಬಹುದು’
-ಕೆ.ಆರ್.ರಮೇಶ್ ಕುಮಾರ್, ಸ್ಪೀಕರ್
‘ಹಿರಿಯ ಸದಸ್ಯ ಎ.ಟಿ.ರಾಮಸ್ವಾಮಿಯವರು ಮಾಡಿದ ಕೆಲಸವನ್ನು ನಾವೇ ಮೊದಲೇ ಮಾಡಬೇಕಿತ್ತು. ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಆಗುತ್ತಿಲ್ಲ’
-ಮಾಧುಸ್ವಾಮಿ, ಬಿಜೆಪಿ ಸದಸ್ಯ







