ಜೆಡಿಎಸ್ ಕಾರ್ಯಕರ್ತರು-ಗೂಂಡಾಗಳಿಂದ ನನ್ನ ಮನೆ ಮೇಲೆ ದಾಳಿ: ಶಾಸಕ ಪ್ರೀತಂ ಗೌಡ

ಬೆಂಗಳೂರು, ಫೆ.13: ಜೆಡಿಎಸ್ ಕಾರ್ಯಕರ್ತರು ಹಾಗೂ ಕೆಲವು ಗೂಂಡಾಗಳು ನಮ್ಮ ಮನೆ ಬಳಿ ಏಕಾಏಕಿ ಧರಣಿ ನಡೆಸಿದ್ದಾರೆ. ನಾನು ಮನೆಯಲ್ಲಿ ಇಲ್ಲದಿರುವಾಗ ನನ್ನ ತಂದೆ, ತಾಯಿಯ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಶಾಸಕ ಪ್ರೀತಂ ಗೌಡ ಹೇಳಿದ್ದಾರೆ.
ನಮ್ಮ ಮನೆಯವರನ್ನು ರಕ್ಷಿಸಲು ಬಂದ ರಾಹುಲ್ ಎಂಬ ಕಾರ್ಯಕರ್ತನ ಮೇಲೂ ಗಂಭೀರ ಹಲ್ಲೆ ನಡೆಸಲಾಗಿದೆ. ಪ್ರತಿಭಟನೆ ಮಾಡಲು ಎಲ್ಲರಿಗೂ ಹಕ್ಕಿದೆ. ಆದರೆ, ಪ್ರತಿಭಟನೆಯ ನೆಪದಲ್ಲಿ ಕಾನೂನು ಕೈಗೆತ್ತಿಕೊಳ್ಳುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.
ನನ್ನ ಮನೆ ಮೇಲೆ ದಾಳಿ ಮಾಡಿದವರು ‘ರೇವಣ್ಣ ಹಾಗೂ ಕುಮಾರಸ್ವಾಮಿ ಬೆಂಬಲವಿದೆ. ಇವರ ಕುಟುಂಬವನ್ನು ಮುಗಿಸಿದರೂ ಯಾವುದೇ ಸಮಸ್ಯೆಯಾಗುವುದಿಲ್ಲ’ ಎಂದು ಮಾತನಾಡಿದ್ದಾರೆ. ನನ್ನ ಕುಟುಂಬ ಸದಸ್ಯರ ಜೊತೆ ಮಾತನಾಡಲು ಆಗುತ್ತಿಲ್ಲ. ಅವರು ಅಷ್ಟೊಂದು ಆಘಾತದಲ್ಲಿದ್ದಾರೆ ಎಂದು ಪ್ರೀತಂ ಗೌಡ ಹೇಳಿದರು.
ಕಳೆದ 3-4 ವರ್ಷಗಳ ಹಿಂದೆಯೂ ಇದೇ ರೀತಿ ದಾಳಿ ನಡೆಸಿ ನನ್ನ ಕಾರನ್ನು ಸಂಪೂರ್ಣ ಜಖಂಗೊಳಿಸಿದರು. ಆನಂತರ ನಾನು ನನ್ನ ಕಾರನ್ನು ಬದಲಾಯಿಸಬೇಕಾಯಿತು ಎಂದು ಹೇಳಿದರು.







