ಸಾಗರದ ಇಬ್ಬರಲ್ಲಿ 'ಮಂಗನ ಕಾಯಿಲೆ' ದೃಢ: ಐವರು ಮಣಿಪಾಲ ಆಸ್ಪತ್ರೆಗೆ ದಾಖಲು

ಶಿವಮೊಗ್ಗ, ಫೆ.13: ಕಳೆದೆರೆಡು ತಿಂಗಳಿನಿಂದ ಮಲೆನಾಡಿಗರನ್ನು ಬೆಂಬಿಡದೆ ಕಾಡುತ್ತಿರುವ ಮಂಗನ ಕಾಯಿಲೆ ಹಾವಳಿ ಮುಂದುವರಿದಿದ್ದು, ಸಾಗರ ತಾಲೂಕು ಕಾರ್ಗಲ್ ಸಮೀಪದ ಕುಳಕಾರು ಗ್ರಾಮದ ಇಬ್ಬರು ಮಂಗನ ಕಾಯಿಲೆ (ಕೆಎಫ್‍ಡಿ) ಯಿಂದ ಬಳಲುತ್ತಿರುವುದು ದೃಢಪಟ್ಟಿದೆ.
ಗೋವಿಂದ ಕುಳಕಾರು ಹಾಗೂ ಚಂದಯ್ಯ ಕುಳಕಾರು ಕೆಎಫ್‍ಡಿಗೆ ತುತ್ತಾದವರೆಂದು ಗುರುತಿಸಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ಜ್ವರದಿಂದ ಬಳಲುತ್ತಿದ್ದ ಇವರು, ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಅಲ್ಲಿನ ವೈದ್ಯರು ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದರು.
ಇಬ್ಬರ ರಕ್ತದ ಮಾದರಿ ಸಂಗ್ರಹಿಸಿ ಹೆಚ್ಚಿನ ತಪಾಸಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿತ್ತು. ಪ್ರಯೋಗಾಲಯದ ವರದಿಯಲ್ಲಿ ಕೆಎಫ್‍ಡಿಯಿರುವುದು ಕಂಡುಬಂದಿದೆ. ಸದ್ಯ ಇಬ್ಬರಿಗೂ ಮಣಿಪಾಲ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ದಾಖಲು: ಈ ನಡುವೆ ಕುಳಕಾರು ಗ್ರಾಮದ ರವಿರಾಜ ಜೈನ್, ರತ್ನಾವತಿ, ಸುರೇಶ, ಪೆಲಿಕ್ಸ್ ನರೋನ್ಹಾ ಹಾಗೂ ಸುದರ್ಶನ ಎಂಬವರಲ್ಲಿ ಶಂಕಿತ ಕೆಎಫ್‍ಡಿ ರೋಗ ಲಕ್ಷಣಗಳು ಕಂಡುಬಂದಿವೆ. ಈ ಹಿನ್ನೆಲೆಯಲ್ಲಿ ಅವರನ್ನು ಮಣಿಪಾಲ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ಮಾಹಿತಿ ನೀಡಿವೆ.
ಗ್ರಾಮದ ಇಬ್ಬರಲ್ಲಿ ಕೆಎಫ್‍ಡಿಯಿರುವುದು ಹಾಗೂ ಹಲವರು ಜ್ವರದಿಂದ ಬಳಲುತ್ತಿರುವುದು ಕುಳಕಾರು ಗ್ರಾಮಸ್ಥರಲ್ಲಿ ತೀವ್ರ ಆತಂಕ ಉಂಟು ಮಾಡಿದೆ. ಕೆಲ ನಿವಾಸಿಗಳು ಮನೆಯಿಂದ ಹೊರಬರಲು ಹೆದರುವಂತಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪತ್ತೆ: ಶರಾವತಿ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಕಳೆದ ಹಲವು ದಿನಗಳ ಕಾಲ ಮೃತ ಮಂಗಗಳ ಶೋಧ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ 70 ಕ್ಕೂ ಅದಿಕ ಮೃತ ಮಂಗಗಳ ದೇಹ ಪತ್ತೆ ಹಚ್ಚಲಾಗಿದೆ ಎಂದು ಸ್ಥಳೀಯ ಅರಣ್ಯ ಇಲಾಖೆ ಮೂಲಗಳು ಮಾಹಿತಿ ನೀಡುತ್ತವೆ.







