ಮನಪಾದ 10 ಸೇವೆಗಳು ಆನ್‌ಲೈನ್ ಪಾವತಿ: ಫೆ. 18ರಂದು ಮರು ಚಾಲನೆ

ಮಂಗಳೂರು, ಫೆ.13: ನೀರಿನ ಶುಲ್ಕ, ಖಾತಾ ಬದಲಾಣೆ, ಖಾತಾ ನೋಂದಣಿ, ನೀರಿನ ಸಂಪರ್ಕ, ಯುಜಿಡಿ ಸಂಪರ್ಕ, ಪುರಭವನದ ಬಾಡಿಗೆ, ಮೈದಾನದ ಬಾಡಿಗೆ ಸೇರಿದಂತೆ ಮಂಗಳೂರು ಮಹಾನಗರ ಪಾಲಿಕೆಯಿಂದ 10 ಸೇವೆಗಳಿಗೆ ಗ್ರಾಹಕರು ಆನ್‌ಲೈನ್ ಮೂಲಕ ಪಾವತಿ ಮಾಡುವ ಯೋಜನೆಗೆ ಫೆ. 18ರಂದು ಮರು ಚಾಲನೆ ನೀಡಲಾಗುವುದು ಎಂದು ಮೇಯರ್ ಭಾಸ್ಕರ ಕೆ. ತಿಳಿಸಿದ್ದಾರೆ.
ಸರ್ಕ್ಯೂಟ್ ಹೌಸ್‌ನಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ ಅನುಷ್ಠಾನಗೊಂಡ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಸುದ್ದಿಗೋಷ್ಠಿಯ ಸಂದರ್ಭ ಅವರು ಈ ವಿಷಯ ತಿಳಿಸಿದರು.
ಈಗಾಗಲೇ ಕೆಲವು ಸೇವೆಗಳು ಆನ್‌ಲೈನ್‌ನಲ್ಲಿ ಲಭ್ಯವಾಗುತ್ತಿದೆ. ಹಾಗಿದ್ದರೂ ತಾಂತ್ರಿಕ ಕಾರಣದಿಂದ ಸೇವೆಗಳಲ್ಲಿ ಅಡಚಣೆಯಾಗುತ್ತಿತ್ತು. ಈಗ ಆ ತೊಂದರೆಗಳನ್ನು ಸರಿಪಡಿಸಿ ಚಾಲನೆ ನೀಡಲಾಗುತ್ತಿದೆ ಎಂದರು.
ಕಾಗದ ರಹಿತ ಕಚೇರಿಯಾಗಿ ಮನಪಾ ಬಹುತೇಕವಾಗಿ ಕಾರ್ಯನಿರ್ವಹಿಸುತ್ತಿದೆ. ಆಸ್ತಿ ತೆರಿಗೆಯನ್ನು ಆನ್‌ಲೈನ್‌ನ ಮೂಲಕ ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ. ತೆರಿಗೆಯ ಮೊತ್ತ ಗೊತ್ತಿದ್ದಲ್ಲಿ ಸದ್ಯ ಆನ್‌ಲೈನ್ ಮೂಲಕ ಪಾವತಿಸಲು ಅವಕಾಶವಿದೆ. ಆದರೆ ಸಂಪೂರ್ಣ ತೆರಿಗೆ ಮಾಹಿತಿಯನ್ನು ಪಡೆದುಕೊಂಡು ಸದ್ಯ ಶುಲ್ಕ ಪಾವತಿಗೆ ಅವಕಾಶ ಆಗಿಲ್ಲ. ಇದಕ್ಕೆ ರಾಜ್ಯ ಸರಕಾರದಿಂದ ಕ್ರಮ ಆಗ ಬೇಕಾಗಿದೆ ಎಂದು ಮೇಯರ್ ಪರವಾಗಿ ಆಯುಕ್ತ ಮುಹಮ್ಮದ್ ನಝೀರ್ ಮಾಹಿತಿ ನೀಡಿದರು.
ಕಳೆದ ಐದು ವರ್ಷಗಳಲ್ಲಿ 403.5 ಕೋಟಿ ರೂ.ಗಳಲ್ಲಿ ಒಟ್ಟು 11688 ಕಾಮಗಾರಿಗಳನ್ನು ಮನಪಾ ವ್ಯಾಪ್ತಿಯಲ್ಲಿ ನಡೆಸಲಾಗಿದೆ ಎಂದು ಮೇಯರ್ ಮಾಹಿತಿ ನೀಡಿದರು.
ಅಮೃತ್ ಯೋಜನೆಯಡಿ ನಾಲ್ಕು ಪಾರ್ಕ್‌ಗಳ ಅಭಿವೃದ್ಧಿ ಕಾಮಗಾರಿಗಳಲ್ಲಿ ಕುಂಜತ್ತಬೈಲು, ಹೊಸಬೆಟ್ಟು ಸುರತ್ಕಲ್ ಪಾರ್ಕ್ ಕಾಮಗಾರಿಗಳು ಪೂರ್ಣಗೊಂಡಿವೆ. ಕದ್ರಿ ಪಾರ್ಕ್ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು ಫೆಬ್ರವರಿಯಲ್ಲಿ ಪೂರ್ಣಗೊಳಿಸಲಾಗುವುದು. ಒಳಚರಂಡಿ ಕಾಮಗಾರಿಗಳ ಪೈಕಿ ಮಿಸ್ಸಿಂಗ್ ಲಿಂಕ್‌ನ 59.73 ಕೋಟಿರೂ. ಮೊತ್ತದ ಒಟ್ಟು 9 ಕಾಮಗಾರಿಗಳು ಪ್ರಗತಿಯಲ್ಲಿವೆ. 2ಮನೆ ಹಂತದ ಎಡಿಬಿ ಯೋಜನೆಯಡಿ ಕುಡಿಯುವ ನೀರಿನ ಯೋಜನೆ 24x7 ಕಾಮಗಾರಿಯ 461 ಕೋಟಿ ರೂ. ಮೊತ್ತದ ಯೋಜನೆಗೆ ಸರಕಾರದಿಂದ ಅನುಮೋದನೆ ದೊರಕಿದ್ದು ಶೀಘ್ರವೇ ಟೆಂಡರ್ ಕರೆಯಲಾವುದು ಎಂದು ಅವರು ತಿಳಿಸಿದರು.
ಪೌರ ಕಾರ್ಮಿಕ ಗೃಹ ಭಾಗ್ಯ ಯೋಜನೆಯಡಿ 134 ಮನೆಗಳನ್ನು ಜಿ+3 ಮಾದರಿಯಲ್ಲಿ 10.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ತಲಾ 7.50 ಲಕ್ಷ ರೂ. ವೆಚ್ಚದಲ್ಲಿ ಪ್ರಥಮ ಹಂತದಲ್ಲಿ 32 ಮನೆಗಳು ನಿರ್ಮಾಣವಾಗಿವೆ. 2ನೆ ಹಂತದ ಮತ್ತು 3ನೆ ಹಂತದ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು, ಪೌರ ಕಾರ್ಮಿಕರ ಬೇಡಿಕೆಯಂತೆ ನಿರ್ಮಾಣವಾಗುವ ಮನೆಯ ವಿಸ್ತೀರ್ಣವನ್ನು ಹೆಚ್ಚಳ ಮಾಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಲಾಗಿದೆ ಎಂದು ಮೇಯರ್ ತಿಳಿಸಿದರು.
ಮನಪಾ ವ್ಯಾಪ್ತಿಯಲ್ಲಿ ವಸತಿ ರಹಿತ 2322 ಮಂದಿಗೆ ವಿವಿಧ ಯೋಜನೆ, ಅನುದಾನ ಹಾಗೂಬ್ಯಾಂಕ್ ಸಾಲ ಮತ್ತು ಫಲಾನುಭವಿಗಳ ವಂತಿಗೆಯಡಿ ಮನೆ ನಿರ್ಮಾಣದ ಯೋಜನೆ ರೂಪಿಸಲಾಗಿದೆ. ಈಗಾಗಲೇ ಇಡ್ಯಾ ಗ್ರಾಮದ ಸವೆ ನಂಬ್ರ 16 ಪಿ1ರಲ್ಲಿ 600 ಮನೆಗಳ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಪದವು ಗ್ರಾಮದ 930 ಮನೆಗಳ ನಿರ್ಮಾಣದ ಯೋಜನೆಗೆ ಸಕಾರದಿಂದ ಅನುಮೋದನೆ ದೊಕಿದ್ದು, ಟೆಂಡರ್ ಕರೆಯಬೇಕಾಗಿದೆ. ಸುರತ್ಕಲ್ ಗ್ರಾಮದಲ್ಲಿ 192 ಮತ್ತು ತಿರುವೈಲ್ ಗ್ರಾಮದಲ್ಲಿ 600 ಮನೆಗಳ ನಿರ್ಮಾಣಕ್ಕೆ ಯೋಜನೆ ತಯಾರಿಸಿದ್ದು, ಸರಕಾರದಿಂದ ಅನುಮೋನದೆಗಾಗಿ ಪ್ರಸ್ತಾವನೆ ಸಲ್ಲಿಸಬೇಕಾಗಿದೆ ಎಂದು ಮೇಯರ್ ಭಾಸ್ಕರ್ ಹೇಳಿದರು.
ಮೂಲಭೂತ ಸೌಕರ್ಯ ಅಭಿವೃದ್ಧಿಯಡಿ ಆಶ್ರಯ ಬಡಾವಣೆ, ಅಂಬೇಡ್ಕರ್ ಬಡಾವಣೆ, ಘೋಷಿತ ಕೊಳಚೆ ಪ್ರದೇಶಗಳು ಮತ್ತು ಇತರ ಪ್ರದೇಶಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವ ಕಾಮಗಾರಿಗಳು ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ವಿದ್ಯಾರ್ಥಿ ನಿಲಯಗಳನ್ನು ಮೇಲ್ದರ್ಜೆ ಗೇರಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದವರು ಹೇಳಿದರು.
ಮುಖ್ಯಮಂತ್ರಿಗಳ ವಿಶೇಷ ಅನುದಾನವಾಗಿ ಈವರೆಗೆ 3 ಹಂತದಲ್ಲಿ 300 ಕೋಟಿರೂ.ಗಳು ಬಿಡುಗಡೆಯಾಗಿ ಕಾಮಗಾರಿಗಳು ನಡೆಸಲಾಗಿದೆ. ಪ್ರಸಕ್ತ ಬಜೆಟ್‌ನಲ್ಲಿ 125 ಕೋಟಿ ರೂ. ವಿಶೇಷ ಅನುದಾನವನ್ನು ಘೋಷಿಸಲಾಗಿದ್ದು, ಸಂಬಂಧಪಟ್ಟ ಇಲಾಖೆಯಿಂದ ನಿರ್ದೇಶನ ಬಂದ ಬಳಿಕ ಮುಂದಿನ ಕ್ರಮ ವಹಿಸುವುದಾಗಿ ಮೇಯರ್ ಭಾಸ್ಕರ್ ತಿಳಿಸಿದರು.
ಕಳೆದ ಐದು ವರ್ಷಗಳ ಅವಧಿಯಲ್ಲಿ ಜನರಿಗೆ ಯಾವುದೇ ರೀತಿಯಲ್ಲಿ ತೆರಿಗೆ ಹೆಚ್ಚಳ ಮಾಡದೆ, ನೀರಿನ ಶುಲ್ಕ ಏರಿಸದೆ ಹೊರೆಯಾಗದಂತೆ ಆಡಳಿತ ನಡೆಸಲಾಗಿದೆ. ಈ ಅವಧಿಯಲ್ಲಿ ಆಗಿರುವ ಪ್ರಗತಿಯು ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲಿದೆ ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ಉಪ ಮೇಯರ್ ಮುಹಮ್ಮದ್ ಕೆ., ಸ್ಥಾಯಿ ಸಮಿತಿ ಅಧ್ಯಕ್ಷರಾದ ಪ್ರವೀಣ್ ಚಂದ್ರ ಆಳ್ವ, ರಾಧಾಕೃಷ್ಣ, ನವೀನ್ ಡಿಸೋಜಾ, ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಸದಸ್ಯ ಅಶೋಕ್ ಡಿ.ಕೆ. ಮೊದಲಾದವರು ಉಪಸ್ಥಿತರಿದ್ದರು.








