ಭ್ರೂಣಲಿಂಗ ಪತ್ತೆ ಕಂಡು ಬಂದರೆ ತಕ್ಷಣ ಮಾಹಿತಿ ನೀಡಿ: ಡಾ.ರಾಮಕೃಷ್ಣರಾವ್
ಮಂಗಳೂರು, ಫೆ.13: ಭ್ರೂಣಲಿಂಗ ಪತ್ತೆ ಕಾನೂನು ಪ್ರಕಾರ ಮಹಾಪರಾಧ. ಯಾವುದೇ ಆಸ್ಪತ್ರೆಯಲ್ಲಿ ವೈದ್ಯರಾಗಲೀ ಅಥವಾ ಹೆತ್ತವರಾಗಲಿ ಭ್ರೂಣಲಿಂಗ ಪತ್ತೆಗೆ ಮುಂದಾಗಬಾರದು. ಒಂದುವೇಳೆ ಇಂತಹ ಪ್ರಕರಣಗಳು ಕಂಡು ಬಂದರೆ ಸಾರ್ವಜನಿಕರು ತಕ್ಷಣ ಮಾಹಿತಿ ನೀಡಬೇಕುಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ಹೇಳಿದ್ದಾರೆ.
ಅವರು ಬುಧವಾರ ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ತಪ್ಪಿತಸ್ಥರಿಗೆ ಆರೋಗ್ಯ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ ಭ್ರೂಣಲಿಂಗ ಪತ್ತೆ ಪ್ರಕರಣ ಕಂಡು ಬಂದಿಲ್ಲ. ಎಂದು ಹೇಳಿದ ಅವರು, ಆರೋಪಿಗಳಿಗೆ ಕಾನೂನಿನಡಿ ಜೈಲು ಶಿಕ್ಷೆ ಹಾಗೂ ದಂಡ ಶಿಕ್ಷೆ ಇದೆ ಎಂದವರು ತಿಳಿಸಿದರು.
ರಾಷ್ಟ್ರೀಯ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ರಾಜೇಶ್ ಮಾತನಾಡಿ, ಜಿಲ್ಲೆಯಲ್ಲಿ 2018ರ ಫೆಬ್ರವರಿ ಮತ್ತು ಅಕ್ಟೋಬರ್‌ನಲ್ಲಿ 1000 ಗಂಡು ಮಕ್ಕಳಿಗೆ ಕ್ರಮವಾಗಿ 1047 ಮತ್ತು 1064 ಹೆಣ್ಣು ಮಕ್ಕಳ ಅನುಪಾತವಿತ್ತು. ಉಳಿದಂತೆ ಇತರ ತಿಂಗಳುಗಳಲ್ಲಿ 902ರಿಂದ 986ರ ನಡುವೆ ಅನುಪಾತವಿದೆ. 2019ರ ಜನವರಿಯಲ್ಲಿ 989ರಷ್ಟು ಹೆಣ್ಣು ಮಕ್ಕಳ ಸಂಖ್ಯೆ ಇತ್ತು ಎಂದು ವಿವರಿಸಿದರು.
ಪರೀಕ್ಷೆ ಸನಿಹದಲ್ಲಿರುವಾಗ ಮಕ್ಕಳ ಮಾನಸಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಇಲಾಖೆಯಿಂದ ಏನು ಕ್ರಮಗಳಾಗಿವೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ರತ್ನಾಕರ್, ಆತ್ಮಹತ್ಯೆ ತಡೆಗಟ್ಟುವ ಮತ್ತು ಒತ್ತಡ ನಿವಾರಣೆ ನಿಟ್ಟಿನಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸುಮಾರು 800ಕ್ಕೂ ಹೆಚ್ಚು ಶಾಲೆಗಳಲ್ಲಿ ತರಬೇತಿ ನೀಡಲಾಗಿದೆ. ಪ್ರತಿ ವಾರ ವಿವಿಧ ಶಾಲೆಗಳಿಂದ ಸುಮಾರು 12ಕ್ಕೂ ಹೆಚ್ಚು ಕರೆಗಳು ವಿಭಾಗಕ್ಕೆ ಬರುತ್ತಿದ್ದು, ಆಯಾ ಶಾಲೆಗಳಿಗೆ ತೆರಳಿ ಸಂಬಂಧಿತ ವಿದ್ಯಾರ್ಥಿಗೆ ಕೌನ್ಸೆಲಿಂಗ್ ನಡೆಸಲಾಗುತ್ತಿದೆ. ಪೋಷಕರಿಗೂ ಕೌನ್ಸೆಲಿಂಗ್ ನಡೆಸಿ ಮಕ್ಕಳಿಗೆ ಒತ್ತಡ ಹೇರದಂತೆ ತಿಳಿ ಹೇಳಲಾಗುತ್ತಿದೆ ಎಂದರು.
ಮಂಗಳೂರು ತಾಲೂಕು ಆರೋಗ್ಯಾಧಿಕಾರಿ ಡಾ.ನವೀನ್ ಚಂದ್ರ, ಕುಟುಂಬಕಲ್ಯಾಣಾಧಿಕಾರಿ ಡಾ.ಸಿಕಂದರ್ ಪಾಶಾ, ಆರೋಗ್ಯ ಕರ್ನಾಟಕ-ಆಯುಷ್ಮಾನ್ ಭಾರತ ಯೋಜನೆಯ ಜಿಲ್ಲಾ ಸಂಯೋಜಕ ಜಗನ್ನಾಥ ಶಿರ್ಲಾಲು, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಉಪಸ್ಥಿತರಿದ್ದರು.
ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಭಾಸ್ಕರ್ ರೈ ಕಟ್ಟ ಸ್ವಾಗತಿಸಿದರು. ಉಪಾಧ್ಯಕ್ಷ ಅನ್ಸಾರ್ ಇನೋಳಿ ಕಾರ್ಯಕ್ರಮ ನಿರೂಪಿಸಿದರು.







