ಪೈಲಟ್‌ಗಳನ್ನು ಬಲಿಪಶು ಮಾಡಿದರೆ ಮುಷ್ಕರಕ್ಕೂ ಸಿದ್ಧ: ಏರ್ ಇಂಡಿಯಾ ಪೈಲಟ್‌ಗಳ ಯೂನಿಯನ್ ಹೇಳಿಕೆ
ಹೊಸದಿಲ್ಲಿ, ಫೆ.13: ಆಡಳಿತ ಮಂಡಳಿಯು ಯಾವುದೇ ಪೈಲಟ್‌ಗಳನ್ನು ಬಲಿಪಶು ಮಾಡಿದರೆ ಮುಷ್ಕರದಂತಹ ತೀವ್ರ ಕ್ರಮಕ್ಕೆ ಮುಂದಾಗಲಿದ್ದೇವೆ ಎಂದು ಏರ್‌ಇಂಡಿಯಾ ಪೈಲಟ್‌ಗಳ ಯೂನಿಯನ್ ತಿಳಿಸಿದೆ.
‘ಹಾರಾಟದ ಭತ್ತೆ’ ನೀಡದಿರುವ ಕಾರಣ ಕರ್ತವ್ಯದ ಪಾಳಿಪಟ್ಟಿ(ಕರ್ತವ್ಯ ಸೂಚಿಸುವ ಪಟ್ಟಿ)ಯಲ್ಲಿ ಯಾವುದೇ ಬದಲಾವಣೆ ಮಾಡಿದರೂ ತಾವದನ್ನು ಪಾಲಿಸುವುದಿಲ್ಲ ಎಂದು ಫೆಬ್ರವರಿ 10ರಂದು ಯೂನಿಯನ್ ತಿಳಿಸಿತ್ತು. ಯಾವುದೇ ಪೈಲಟ್‌ಗಳನ್ನು ಬಲಿಪಶು ಮಾಡಿದರೂ, ಅವರ ಹಿತಾಸಕ್ತಿಯ ರಕ್ಷಣೆಗೆ ಯೂನಿಯನ್ ಮುಂದಾಗಲಿದೆ ಮತ್ತು ಯಾವುದೇ ಮಟ್ಟದ ಹೋರಾಟಕ್ಕೂ ಹಿಂಜರಿಯುವುದಿಲ್ಲ . ಪೈಲಟ್‌ಗಳ ಕಾನೂನು ನೆರವು ಸೇರಿದಂತೆ ಸರ್ವ ನೆರವು ಒದಗಿಸಲಾಗುವುದು ಎಂದು ಭಾರತೀಯ ವಾಣಿಜ್ಯ ಪೈಲಟ್‌ಗಳ ಸಂಘಟನೆ(ಐಸಿಪಿಎ)ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಫೆ.12ರಂದು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಐಸಿಪಿಎ ಏರ್ ಇಂಡಿಯಾದ ಸಣ್ಣ ಗಾತ್ರದ ವಿಮಾನಗಳ ಹಾರಾಟ ನಿರ್ವಹಿಸುವ ಪೈಲಟ್‌ಗಳ ಸಂಘಟನೆಯಾಗಿದೆ. ‘ದಿ ಇಂಡಿಯನ್ ಪೈಲಟ್ಸ್ ಗಿಲ್ಡ್(ಐಪಿಜಿ)’ ಏರ್‌ಇಂಡಿಯಾದ ದೊಡ್ಡಗಾತ್ರದ ವಿಮಾನಗಳನ್ನು ಹಾರಿಸುವ ಪೈಲಟ್‌ಗಳ ಸಂಘಟನೆಯಾಗಿದೆ. ಓರ್ವ ಪೈಲಟ್ ಒಂದು ತಿಂಗಳಿನಲ್ಲಿ ಎಷ್ಟು ಗಂಟೆ ವಿಮಾನ ಹಾರಾಟ ನಡೆಸಿದ್ದಾನೆ ಎಂಬ ಆಧಾರದಲ್ಲಿ ಹಾರಾಟ ಭತ್ಯೆಯನ್ನು ನಿಗದಿಗೊಳಿಸಲಾಗುತ್ತದೆ ಮತ್ತು ಇದು ಒಟ್ಟು ವೇತನ ಪ್ಯಾಕೇಜ್‌ನ ಶೇ.70ರಷ್ಟಾಗಿರುತ್ತದೆ. ಪೈಲಟ್‌ಗಳು ಒತ್ತಡದ ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಇದು ವಿಮಾನ ಸಂಚಾರ ಸುರಕ್ಷತೆಯ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಎರಡೂ ಕಾರ್ಮಿಕ ಸಂಘಟನೆಗಳು ತಿಳಿಸಿವೆ.