ಈ 5 ನೋವುಗಳಿಗೆ ನೀವು ಮನೆಯಲ್ಲಿ ಚಿಕಿತ್ಸೆ ಮಾಡಲೇಬೇಡಿ
ಕೂಡಲೇ ವೈದ್ಯರ ಭೇಟಿಯಾಗಿ
ತೀವ್ರ ಕಿರಿಕಿರಿಯನ್ನುಂಟು ಮಾಡುವ ಬೆನ್ನುನೋವು, ಫ್ಲೂ ನಂತಹ ಲಕ್ಷಣಗಳೊಂದಿಗಿನ ನೋವು,ತೋಳುಗಳಲ್ಲಿ ನೋವು,ಹೊಟ್ಟೆಯುಬ್ಬರದಿಂದ ನೋವು ಹೀಗೆ ಹಲವಾರು ವಿಧಗಳ ನೋವುಗಳಿವೆ. ಈ ಎಲ್ಲ ನೋವುಗಳಿಗೂ ನೋವು ನಿವಾರಕ ಮಾತ್ರೆಯನ್ನು ನುಂಗುವ ಮೂಲಕ ಶಮನ ಪಡೆಯಲು ಸಾಧ್ಯವಿಲ್ಲ.
ಮೈಕೈ ನೋವು,ತಲೆನೋವು ಹೀಗೆ ನಮ್ಮ ಶರೀರದಲ್ಲಿ ನೋವು ಕಾಣಿಸಿಕೊಂಡಾಗ ನಾವು ಸಾಕಷ್ಟು ವಿಚಾರ ಮಾಡದೆ ನೋವು ನಿವಾರಕ ಮಾತ್ರೆಯನ್ನು ನುಂಗುತ್ತೇವೆ. ನೋವು ಕೆಲವು ಸಂದರ್ಭಗಳಲ್ಲಿ ನಮ್ಮ ಶರೀರವು ಗಂಭೀರ ಅನಾರೋಗ್ಯದ ಬಗ್ಗೆ ನಿಮಗೆ ರವಾನಿಸಲು ಪ್ರಯತ್ನಿಸುತ್ತಿರುವ ಬಲವಾದ ಸಂಕೇತವಾಗಿರಬಹುದು. ನೋವು ನಿವಾರಕ ಮಾತ್ರೆಯನ್ನು ನುಂಗುವುದು ಎಲ್ಲದಕ್ಕೂ ಪರಿಹಾರವಲ್ಲ ಮತ್ತು ಕೆಲವು ನೋವುಗಳಿಗೆ ನೀವು ಸ್ವಂತ ಚಿಕಿತ್ಸೆಯನ್ನು ಮಾಡಿಕೊಳ್ಳಲೇಬಾರದು.
►ಜ್ವರದೊಂದಿಗೆ ನೋವು
ಜ್ವರ,ದಣಿವು ಮತ್ತು ಕೆಂಪಗೆ ಊದಿಕೊಂಡ ಸಂದುಗಳೊಂದಿಗೆ ನೋವು ಕಾಣಿಸಿಕೊಂಡಾಗ ನೋವು ನಿವಾರಕಗಳನ್ನು ನುಂಗಬಾರದು. ಇವು ನೀವು ವೈದ್ಯರನ್ನು ಭೇಟಿಯಾಗುವುದು ಅಗತ್ಯವಾಗಿರುವ ಅನಾರೋಗ್ಯದ ಎಚ್ಚರಿಕೆಯ ಸಂಕೇತವಾಗಿರಬಹುದು. ನಿರಂತರವಾಗಿ ಇವುಗಳನ್ನು ಕಡೆಗಣಿಸುತ್ತಿದ್ದರೆ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಸಂದುನೋವು ದೀರ್ಘಕಾಲಿಕವಾಗಬಲ್ಲ ರುಮಟಾಯ್ಡೆ ಸಂಧಿವಾತದ ಲಕ್ಷಣವಾಗಿದೆ. ಉರಿಯೂತ ಕಾಯಿಲೆಯೂ ಇದಕ್ಕೆ ಕಾರಣವಾಗಿರಬಹುದು ಮತ್ತು ಇದು ವಿರೂಪಗೊಂಡ ಸಂದುಗಳು,ಸಂದು ಮತ್ತು ಸ್ನಾಯುಗಳ ಕಾರ್ಯ ವೈಫಲ್ಯಕ್ಕೆ ಕಾರಣವಾಗಬಹುದು.
►ಎಡತೋಳಿನಲ್ಲಿ ನೋವು
ಅತಿಯಾದ ಭಾರವನ್ನು ಎತ್ತುವುದು ತೋಳುಗಳಲ್ಲಿ ನೋವಿಗೆ ಕಾರಣಗಳಲ್ಲೊಂದಾಗಿದೆ. ಆದರೆ ಎಡತೋಳಿನಲ್ಲಿ ನೋವು ಉಂಟಾದಾಗ ಮತ್ತು ಎದೆಯು ಕಟ್ಟಿಕೊಂಡಂತಾಗಿದ್ದರೆ ಇದನ್ನು ಲಘುವಾಗಿ ಪರಿಗಣಿಸಬಾರದು. ಇದು ಪರಿಧಮನಿ ರೋಗದಲ್ಲಿಯಂತೆ ಹೃದಯಕ್ಕೆ ರಕ್ತ ಪೂರೈಕೆ ಕಡಿಮೆಯಾಗಿರುವುದರ ಸಂಕೇತವಾಗಿರಬಹುದು.
►ಕಣಕಾಲುಗಳಲ್ಲಿ ನೋವು
ನೀವು ಯಾವುದೇ ದೈಹಿಕ ಚಟುವಟಿಕೆ ನಡೆಸದಿದ್ದಾಗ ಮತ್ತು ಕಣಕಾಲುಗಳ ಮಾಂಸಖಂಡಗಳಲ್ಲಿ ಸೆಳೆತಗಳಿಂದ ಕೂಡಿದ ನೋವು ಉಂಟಾಗುತ್ತಿದ್ದರೆ ನೋವು ನಿವಾರಕ ಮಾತ್ರೆಯನ್ನು ಸೇವಿಸಕೂಡದು. ಚರ್ಮವು ಬಣ್ಣ ಕಳೆದುಕೊಂಡಿದ್ದರೆ ಮತ್ತು ಚರ್ಮದ ತಾಪಮಾನ ಕಡಿಮೆಯಾಗಿದ್ದರೆ ಅದು ಗಂಭೀರ ಕಾರಣವನ್ನು ಸೂಚಿಸಬಹುದು. ಅಪಧಮನಿಗಳಲ್ಲಿ ರಕ್ತ ಪರಿಚಲನೆ ಕೊರತೆ ಅಥವಾ ಯಾವುದಾದರೂ ಅಂಗಕ್ಕೆ ರಕ್ತಪೂರೈಕೆಯಲ್ಲಿ ತಡೆಯಾಗಿರುವುದು ಕಣಕಾಲುಗಳಲ್ಲಿ ನೋವಿಗೆ ಕಾರಣವಾಗಬಲ್ಲುದು.
►ದೀರ್ಘಕಾಲಿಕ ಬೆನ್ನುನೋವು
ಬೆನ್ನು ನೋವು ಕಾಣಿಸಿಕೊಂಡ ಕೆಲವೇ ದಿನಗಳಲ್ಲಿ ಮಾಯವಾಗದಿದ್ದರೆ ವೈದ್ಯರನ್ನು ಕಾಣುವುದು ಅಗತ್ಯವಾಗುತ್ತದೆ. ಮರಗಟ್ಟುವಿಕೆಯೊಂದಿಗಿನ ಬೆನ್ನುನೋವು ಅಥವಾ ಕೈಕಾಲುಗಳಲ್ಲಿ ನಿಶ್ಶಕ್ತಿ,ಜುಮುಗುಟ್ಟುವಿಕೆ ಇತ್ಯಾದಿಗಳು ಗಂಭೀರ ಸಮಸ್ಯೆಯನ್ನು ಸೂಚಿಸುತ್ತವೆ.
►ರಾತ್ರಿಗಳಲ್ಲಿ ತೀವ್ರಗೊಳ್ಳುವ ನೋವು ಶರೀರದ ಯಾವುದೇ ಭಾಗವು ತೀವ್ರವಾಗಿ ನೋಯುತ್ತಿದ್ದರೆ ಮತ್ತು ರಾತ್ರಿ ಅದು ಇನ್ನಷ್ಟು ಹದಗೆಡುತ್ತಿದ್ದರೆ ಅದು ಯಾವುದೋ ಗಂಭೀರ ಅನಾರೋಗ್ಯದ ಲಕ್ಷಣವಾಗಿರಬಹುದು. ರಾತ್ರಿಯಲ್ಲಿ ನೋವು ರಕ್ತಹೀನತೆ,ವಿವರಿಸಲಾಗದ ಮೂಳೆ ಪೆಟ್ಟುಗಳು,ಪದೇ ಪದೇ ಸೋಂಕುಗಳು ಮತ್ತು ಬಳಲಿಕೆಯಿಂದ ಕೂಡಿದ್ದರೆ ಅದು ಮೂಳೆ ಕ್ಯಾನ್ಸರ್‌ನ ಒಂದು ವಿಧವಾಗಿರಬಹುದು.