ಹಿರಿಯಡ್ಕ ಕಾಲೇಜಿನಲ್ಲಿ ಸಾಂಸ್ಕೃತಿಕ ಸ್ಪರ್ಧೆ ‘ಕಲಾಸಿರಿ’

ಉಡುಪಿ, ಫೆ.13:ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಜ್ಞಾನಾರ್ಜನೆ ಜೊತೆಗೆ ತಮ್ಮಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಅನಾವರಣಗೊಳಿಸುವ ಮೂಲಕ ಸರ್ವಾಂಗೀಣ ಪ್ರಗತಿಯನ್ನು ಸಾಧಿಸಿ, ಪರಿಪೂರ್ಣ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಸಮಾಜ ಸೇವಕಿ ಹಾಗೂ ಕನ್ನರಪಾಡಿಯ ಶ್ರೀಜಯದುರ್ಗ ಪರಮೇಶ್ವರಿ ದೇವಸ್ಥಾನದ ಟ್ರಸ್ಟಿ ನಿರೂಪಮಾ ಪ್ರಸಾದ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.
ಹಿರಿಯಡ್ಕದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ 2018-19ನೇ ಸಾಲಿನ ಸಾಂಸ್ಕೃತಿಕ ಸ್ಪಧಾ ಕಾರ್ಯಕ್ರಮ ‘ಕಲಾಸಿರಿ’ಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ವಿದ್ಯಾರ್ಥಿಗಳು ಸಮಾಜ ಸೇವೆಯ ಮನೋಭಾವವನ್ನು ಬೆಳೆಸಿಕೊಳ್ಳುವ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡುವ ಸಾಮಾಜಿಕ ಕಳಕಳಿಯನ್ನು ಬೆಳೆಸಿಕೊಂಡಾಗ ಸದೃಢ ಸಮಾಜ ನಿರ್ಮಾಣ ಸಾಧ್ಯ ವಾಗಬಲ್ಲದು ಎಂದವರು ನುಡಿದರು.
ಕಾಲೇಜಿನ ಪ್ರಾಂಶುಪಾಲೆ ಡಾ. ನಿಕೇತನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಸ್ಯಾಕ್ಸೋಫೋನ್ ವಾದಕಿ ಹಾಗೂ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ದೀಕ್ಷಾ ಸ್ಯಾಕ್ಸೋಪೋನ್ ನುಡಿಸಿದರು.
ಮುಖ್ಯ ಅತಿಥಿಗಳು ಹಾಗೂ ತೀರ್ಪುಗಾರರಾಗಿ ಆಕಾಶವಾಣಿ ಕಲಾವಿದ ಹಾಗೂ ಜಿಲ್ಲಾ ಜಾನಪದ ಸಾಹಿತ್ಯ ಪರಿಷತ್ ಅಧ್ಯಕ್ಷ ಗಣೇಶ್ ಗಂಗೊಳ್ಳಿ, ರಂಗ ಕಲಾವಿದ ಮತ್ತು ಉಪನ್ಯಾಸಕ ದಯಾನಂದ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ದುರ್ಗಾಮೆನನ್, ಭರತನಾಟ್ಯ ಕಲಾವಿದೆ ಕಲ್ಯಾಣಿ, ವಿದ್ಯಾರ್ಥಿ ಕ್ಷೇಮ ಪಾಲನಾ ಸಮಿತಿಯ ಸಂಚಾಲಕಿ ಪ್ರೊ.ಸುಜಯಾ ಕೆ.ಎಸ್, ಸಾಂಸ್ಕೃತಿಕ ವೇದಿಕೆಯ ವಿದ್ಯಾರ್ಥಿ ಪ್ರತಿನಿಧಿಗಳಾದ ಸಂದೀಪ್, ಆಶಾಲತಾ, ವಿದ್ಯಾರ್ಥಿ ಕ್ಷೇಮ ಪಾಲನಾ ಸಮಿತಿಯ ಪದಾಧಿಕಾರಿಗಳಾದ ಹರ್ಷಿತ್ ಶೆಟ್ಟಿ, ಸುಧೀರ್, ಶ್ರೀರಕ್ಷಾ ಉಪಸ್ಥಿತರಿದ್ದರು.
ಕಾಲೇಜಿನ ಸಾಂಸ್ಕೃತಿಕ ವೇದಿಕೆ ಸಂಚಾಲಕ ಪ್ರೊ.ಪ್ರವೀಣ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಭಾಷ್ ಹೆಚ್.ಕೆ ಕಾರ್ಯಕ್ರಮ ನಿರೂಪಿಸಿ ಸುಮನಾ ಬಿ. ವಂದಿಸಿದರು.







