ಲೋಕಸಭೆ ಚುನಾವಣೆ ಮುನ್ನ ಪಿಎಂ-ಕಿಸಾನ್ ಯೋಜನೆಯ 2 ಕಂತು ಹಣ ನೀಡಲು ಕೇಂದ್ರ ಸಿದ್ಧತೆ
ಹೊಸದಿಲ್ಲಿ, ಫೆ. 13: ಲೋಕಸಭೆ ಚುನಾವಣೆಗಿಂತ ಮುನ್ನ ನೂತನವಾಗಿ ಘೋಷಿಸಲಾದ ಪಿಎಂ-ಕಿಸಾನ್ ಯೋಜನೆಯ ಅರ್ಹ ರೈತರಿಗೆ ಮೊದಲ ಎರಡು ಕಂತಿನ ಮೊತ್ತವಾದ 4000 ರೂ. ನೀಡಲು ಕೇಂದ್ರ ಸರಕಾರ ಸಿದ್ಧತೆ ನಡೆಸುತ್ತಿದೆ. 2 ಹೆಕ್ಟೇರ್ ವರೆಗೆ ಭೂಮಿ ಹೊಂದಿರುವ 12 ಕೋಟಿ ಅರ್ಹ ಸಣ್ಣ ಹಾಗೂ ಮಧ್ಯಮ ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಎಂದು ಕರೆಯಲಾಗುವ ನೇರ ಆದಾಯ ಬೆಂಬಲ ಯೋಜನೆಯ ಅಡಿಯಲ್ಲಿ 6000 ರೂಪಾಯಿಯನ್ನು ಮೂರು ಕಂತುಗಳಲ್ಲಿ ಖಾತೆಗೆ ನೇರವಾಗಿ ನೀಡಲಾಗುವುದು ಎಂದು ಇತ್ತೀಚೆಗೆ ಮಧ್ಯಂತರ ಬಜೆಟ್ ಮಂಡಿಸಿದ ಸಂದರ್ಭ ಪಿಯೂಷ್ ಗೋಯಲ್ ಹೇಳಿದ್ದರು.
ಈ ವಿತ್ತ ವರ್ಷದಿಂದ ಈ ಯೋಜನೆಯನ್ನು ಆರಂಭಿಸಲಾಗುವುದು ಹಾಗೂ ಮೊದಲ ಕಂತು 2000 ರೂಪಾಯಿಯನ್ನು ಮಾರ್ಚ್‌ನಲ್ಲಿ ನೀಡಲಾಗುವುದು ಎಂದು ಅವರು ಹೇಳಿದ್ದರು. ಅರ್ಹ ರೈತರನ್ನು ಗುರುತಿಸುವ ಪ್ರಕ್ರಿಯೆಯಲ್ಲಿ ರಾಜ್ಯಗಳು ತೊಡಗಿಕೊಂಡಿವೆ. ಫಲಾನುಭವಿಗಳ ಆರಂಭಿಕ ಪಟ್ಟಿ ಶೀಘ್ರ ಸಿದ್ಧವಾಗಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್ ಹಾಗೂ ಮಹಾರಾಷ್ಟ್ರದಂತಹ ಹಲವು ರಾಜ್ಯಗಳು ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿದೆ. ತೆಲಂಗಾಣ, ಒಡಿಶ್ಶಾ ಹಾಗೂ ಜಾರ್ಖಂಡ್‌ನಂತಹ ರಾಜ್ಯಗಳು ಕೂಡ ಇಂತಹ ಯೋಜನೆಗಳನ್ನು ಘೋಷಿಸಿದೆ ಎಂದು ಅವರು ತಿಳಿಸಿದ್ದಾರೆ. ಲೋಕಸಭೆ ಚುನಾವಣೆ ಮುನ್ನ ಎರಡು ಕಂತುಗಳನ್ನು ನೀಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿ, ನಾವು ಅದಕ್ಕೆ ಸಿದ್ಧರಾಗಿದ್ದೇವೆ. ಲೋಕಸಭೆ ಚುನಾವಣೆ ಮುನ್ನ ಎರಡು ಕಂತುಗಳ ಒಟ್ಟು 4000 ರೂಪಾಯಿಯನ್ನು ವರ್ಗಾಯಿಸುವ ಸಿದ್ಧತೆಯಲ್ಲಿ ಇದ್ದೇವೆ ಎಂದರು.