ಕ್ರೀಡಾ ತರಬೇತುದಾರರಿಗೆ ಸೌಲಭ್ಯ ನೀಡಲು ನಿಯಮಗಳಿಗೆ ತಿದ್ದುಪಡಿ: ಸಚಿವ ರಹೀಂ ಖಾನ್

ಬೆಂಗಳೂರು, ಫೆ.13: ಕರ್ನಾಟಕ ಕ್ರೀಡಾ ಪ್ರಾಧಿಕಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ತರಬೇತುದಾರರಿಗೆ ಮೂಲವೇತನ ಹಾಗೂ ಎಲ್ಲ ರೀತಿಯ ಸೌಲಭ್ಯ ನೀಡಲು ಹಾಲಿ ಇರುವ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡಲು ಹಣಕಾಸು, ಕಾನೂನು, ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆಗೆ ಕಳುಹಿಸಿಕೊಡಲಾಗಿದೆ ಎಂದು ಯುವಜನ ಕ್ರೀಡಾ ಸಚಿವ ರಹೀಂ ಖಾನ್ ಹೇಳಿದ್ದಾರೆ.
ಬುಧವಾರ ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಎಸ್.ವಿ.ಸಂಕನೂರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಿಂದಿನ ಕಲಾಪದಲ್ಲೇ ಹಾಲಿ ಇರುವ ನಿಯಮಾವಳಿಗೆ ತಿದ್ದುಪಡಿ ಮಾಡಲಾಗುವುದು ಎಂದು ಸಚಿವರಾಗಿದ್ದ ಡಾ.ಜಿ.ಪರಮೇಶ್ವರ್ ಹೇಳಿದ್ದರು. ಯಾವ ಕಾರಣಕ್ಕಾಗಿ ಈವರೆಗೆ ತಿದ್ದುಪಡಿ ಮಾಡಿಲ್ಲ ಎಂದು ಪ್ರತಿಪಕ್ಷದ ಸದಸ್ಯರು ಸಚಿವರನ್ನು ತರಾಟೆಗೆ ತೆಗೆದುಕೊಂಡರು. ಕ್ರೀಡಾ ಪ್ರಾಧಿಕಾರದಲ್ಲಿ 1996ರಿಂದ 2003ರವರೆಗೆ ಕಾರ್ಯನಿರ್ವಹಿಸಿದ ತರಬೇತುದಾರರಿಗೆ ಮೂಲವೇತನ ಮತ್ತು ಸೌಲಭ್ಯ ಕಲ್ಪಿಸಲು ಸರಕಾರ ಬದ್ಧವಾಗಿದೆ. ಹಾಲಿ ಇರುವ ನಿಯಮಗಳಿಗೆ ತಿದ್ದುಪಡಿ ಮಾಡಲು ಸರಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಬಿಜೆಪಿ ಸದಸ್ಯೆ ತೇಜಸ್ವಿನಿ, ಪ್ರಕಾಶ್ ರಾಥೋಡ್, ಎಚ್.ಎಂ.ರೇವಣ್ಣ ಸೇರಿ ಅನೇಕ ಸದಸ್ಯರು ಕ್ರೀಡಾ ಪ್ರಾಧಿಕಾರದ ತರಬೇತುದಾರರಿಗೆ ಮೂಲಭೂತ ಸೌಕರ್ಯ ಕಲ್ಪಿಸಿಕೊಡಲು ಇರುವ ತೊಂದರೆಗಳಾದರೂ ಏನು ಎಂದು ಪ್ರಶ್ನಿಸಿದರು. ಕ್ರೀಡಾ ತರಬೇತುದಾರರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ನಮ್ಮ ಸರಕಾರ ಬದ್ಧವಾಗಿದೆ ಎಂದು ಸಚಿವರು ಭರವಸೆ ನೀಡಿದರು.





