ಜಮ್ಮು: 35 ಎ ಪರಿಚ್ಛೇದ ಪ್ರಶ್ನಿಸಿದ ಅರ್ಜಿ ವಿರೋಧಿಸಿ ಪ್ರತಿಭಟನೆ
ಶ್ರೀನಗರ, ಫೆ.13: ಜಮ್ಮು- ಕಾಶ್ಮೀರದ ಪೌರರಿಗೆ ವಿಶೇಷ ಹಕ್ಕು ಮತ್ತು ಸೌಲಭ್ಯ ಒದಗಿಸುವ ಸಂವಿಧಾನದ 35ಎ ಪರಿಚ್ಛೇದವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಅರ್ಜಿಯನ್ನು ವಿರೋಧಿಸಿ ಬುಧವಾರ ಜಮ್ಮು ಕಾಶ್ಮೀರದಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಪ್ರತಿಭಟನೆ ನಡೆಸಲಾಗಿದೆ.
ಈ ಅರ್ಜಿಯನ್ನು ಸುಪ್ರೀಂಕೋರ್ಟ್ ಫೆ.14ರಂದು ವಿಚಾರಣೆಗೆ ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ. ಪ್ರತ್ಯೇಕತಾವಾದಿಗಳ ಒಕ್ಕೂಟವಾಗಿರುವ ‘ಜಂಟಿ ಪ್ರತಿರೋಧ ನಾಯಕತ್ವ’ದ ಬ್ಯಾನರ್ ನಡಿ ಮಂಗಳವಾರ ಮತ್ತು ಬುಧವಾರ ಬಂದ್ ಆಚರಿಸಲು ಕರೆ ನೀಡಲಾಗಿತ್ತು. ಜಮ್ಮು ಕಾಶ್ಮೀರದ ಜನತೆಯ ಹಿತಾಸಕ್ತಿಗೆ ವಿರುದ್ಧವಾದ ಹಾಗೂ ವಿವಾದಿತ ವಿಶೇಷ ಸ್ಥಾನಮಾನದ ಕುರಿತ ನಿರ್ಧಾರವನ್ನು ನ್ಯಾಯಾಲಯದ ಮೂಲಕ ಪ್ರಕಟಿಸಿದರೆ ತಕ್ಷಣ ರಾಜ್ಯದಾದ್ಯಂತ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಮತ್ತು ಇದರ ಜವಾಬ್ದಾರಿ ಆಡಳಿತ ವರ್ಗದ್ದಾಗಿದೆ ಎಂದು ಜಂಟಿ ಪ್ರತಿರೋಧ ನಾಯಕತ್ವ’ದ ಹೇಳಿಕೆ ತಿಳಿಸಿದೆ.
ಈ ಪ್ರಕರಣದ ವಿಚಾರಣೆಯನ್ನು ಮುಂದೂಡುವಂತೆ ಸೋಮವಾರ ಜಮ್ಮು ಕಾಶ್ಮೀರ ಸರಕಾರ ಸುಪ್ರೀಂಕೋರ್ಟ್‌ನ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದೆ. ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಇರುವ ಕಾರಣ ಇಲ್ಲಿ ಚುನಾಯಿತ ಸರಕಾರದ ಪ್ರಾತಿನಿಧ್ಯವಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.