ಸಿದ್ಧರಾಮೇಶ್ವರ ಭವನ ನಿರ್ಮಾಣಕ್ಕೆ ಹಣ ಬಿಡುಗಡೆ: ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು, ಫೆ. 13: ಕಲಬುರಗಿ ನಗರದಲ್ಲಿ ಸಿದ್ದರಾಮೇಶ್ವರ ಭವನ (ಭೋವಿ ಸಮುದಾಯ ಭವನ) ನಿರ್ಮಾಣ ಮಾಡಲು 3.50 ಕೋಟಿ ರೂ.ಅನುದಾನ ಬಿಡುಗಡೆ ಮಾಡಿ ಸಮಾಜಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಸಿದ್ಧರಾಮೇಶ್ವರ ಭವನ ನಿರ್ಮಿಸಲು ಸೂಕ್ತ ನಿವೇಶನ ಒದಗಿಸಲು ಕಲಬುರಗಿ ಜಿಲ್ಲಾಧಿಕಾರಿಗೆ ಸರಕಾರ ಸೂಚಿಸಿದೆ. ಸಿದ್ದರಾಮೇಶ್ವರ ಭವನ ನಿರ್ಮಾಣಕ್ಕೆ ಅನುದಾನ ಒದಗಿಸಿರುವುದು ಕಲಬುರಗಿ ಜಿಲ್ಲೆಯ ಜನರ ಬಹುದಿನದ ಕನಸು ನನಸಾಗಿದ್ದು, ಸಮುದಾಯ ಅಭ್ಯುದಯಕ್ಕೆ ಸಹಕಾರಿಯಾಗಲಿದೆ. ಜೊತೆಗೆ ಸಾಂಸ್ಕೃತಿಕ ಅಧ್ಯಯನ ಕೇಂದ್ರವಾಗಲಿದೆ. ಹೀಗಾಗಿ ಸಮುದಾಯದ ಜನರ ಸದ್ಭಳಕೆಯಾಗಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.
ಸಮುದಾಯ ಭವನ ನಿರ್ಮಾಣದ ಉಸ್ತುವಾರಿಯನ್ನು ನೋಡಿಕೊಳ್ಳಲು ಜಿಲ್ಲಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
Next Story





