ಮಂಗಳೂರು: ಅಕ್ರಮ ಮರಳು ಸಾಗಾಟ 4 ಲಾರಿಗಳ ವಶ

ಮಂಗಳೂರು, ಫೆ.13: ಅಕ್ರಮವಾಗಿ ಕೇರಳ ಕಡೆಗೆ ಮರಳು ಸಾಗಾಟ ಮಾಡುತ್ತಿದ್ದ ನಾಲ್ಕು ಲಾರಿಗಳನ್ನು ಬುಧವಾರ ಕಂಕನಾಡಿ ನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಿ.ಸಿ. ರೋಡ್ ಕಡೆಯಿಂದ ಪಡೀಲ್ ಮಾರ್ಗವಾಗಿ ಕೇರಳ ಕಡೆಗೆ ಬರುತ್ತಿದ್ದ ಆಸ್ಟಿನ್ ಮಿರಾಂದ ಮಾಲಕ-ಚಾಲಕನಾಗಿದ್ದ ಟಿಪ್ಪರ್, ಹಸನಬ್ಬ ಮಾಲಕ-ಚಾಲಕನಾಗಿದ್ದ ಟಿಪ್ಪರ್, ಅಬ್ದುಲ್ ರೆಹಮಾನ್ ಮಾಲಕತ್ವದ ಬಿಜು ಎಂಬಾತ ಚಾಲಕನಾಗಿರುವ ಲಾರಿ ಮತ್ತು ಹರೀಶ್ ಮಾಲಕತ್ವದ ಲಾರಿಗಳಲ್ಲಿ ಮರಳನ್ನು ಯಾವುದೇ ಪರವಾನಗಿ ಇಲ್ಲದೆ ಕೇರಳ ರಾಜ್ಯಕ್ಕೆ ಸಾಗಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ವಶಪಡಿಸಿಕೊಂಡ ಮರಳು ಸಮೇತ ಲಾರಿಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಲಾಗಿದೆ. ಸ್ವಾಧೀನ ಪಡಿಸಿಕೊಂಡ ಮರಳು ಮತ್ತು ಲಾರಿಯ ಒಟ್ಟು ಮೌಲ್ಯ 36,50,000 ರೂ.ಎಂದು ಅಂದಾಜಿಸಲಾಗಿದೆ.
ಕಂಕನಾಡಿ ನಗರ ಇನ್‌ಸ್ಪೆಕ್ಟರ್ ಅಶೋಕ್ ಪಿ. ಹಾಗೂ ಪಿ.ಎಸ್.ಐ. ಪ್ರದೀಪ್ ಟಿ. ಆರ್. ಮತ್ತು ಸಿಸಿಬಿ ಘಟಕದ ಪಿ.ಎಸ್.ಐ. ಕಬ್ಬಾಳ್ ರಾಜ್ ಮತ್ತು ಠಾಣಾ ಸಿಬ್ಬಂದಿ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.





